ಬೆಂಗಳೂರು, ನ.20-ಕಬ್ಬು ಬೆಳೆಗಾರರು ಹಾಗೂ ರೈತರ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಬೆಳಗಾವಿಯ ಚಳಿಗಾಲದ ವಿಧಾನಮಂಡಲ ಅಧಿವೇಶಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ.
ರಾಜ್ಯ ಸರ್ಕಾರದ ಶಿಫಾರಸನ್ನು ಆಧರಿಸಿ ರಾಜ್ಯಪಾಲ ವಜುಭಾಯಿವಾಲ ಅಧಿವೇಶನದ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿ.10ರಿಂದ 20ರವರೆಗೆ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ.
ಡಿ.10ರಂದು ಬೆಳಗ್ಗೆ 12.15ಕ್ಕೆ ವಿಧಾನಮಂಡಲ ಸಮಾವೇಶ ಆರಂಭಗೊಳ್ಳಲಿದೆ.ಮೊದಲ ವಾರದ ಐದು ದಿನ, ಎರಡನೇ ವಾರದ ನಾಲ್ಕು ದಿನ ಸೇರಿ ಒಟ್ಟು 9 ದಿನ ವಿಧಾನಮಂಡಲದ ಕಾರ್ಯಕಲಾಪಗಳು ಜರುಗಲಿವೆ.
ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಇದು ಮೊದಲನೆಯ ಅಧಿವೇಶನ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಪ್ರದಾಯವನ್ನು ಹುಟ್ಟಿ ಹಾಕಿದ್ದೇ ಎಚ್.ಡಿ.ಕುಮಾರಸ್ವಾಮಿ ಅವರು. ಈ ಹಿಂದೆ ಜೆಡಿಎಸ್ -ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಈವರೆಗೂ ಅಸ್ಥಿತ್ವಕ್ಕೆ ಬಂದ ಎಲ್ಲಾ ಸರ್ಕಾರಗಳು ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿವೆ. 12 ವರ್ಷಗಳ ನಂತರ ಮತ್ತೆ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಮತ್ತೊಮ್ಮೆ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಭಾಗವಹಿಸುವ ಮೂಲಕ ಹೊಸ ಭಾಷ್ಯ ಬರೆಯುತ್ತಿದ್ದಾರೆ.
ಆದರೆ, ಈ ಬಾರಿಯ ಅಧಿವೇಶನ ಮೈತ್ರಿ ಸರ್ಕಾರಕ್ಕೆ ಸವಾಲೊಡ್ಡುವಂತಿದೆ.ಅಧಿವೇಶನಕ್ಕೂ ಮುನ್ನವೇ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಕಬ್ಬು ಬೆಳೆ ಪಾವತಿ ವಿಷಯದಲ್ಲಿ ಸಾಕಷ್ಟು ಗೊಂದಲಗಳಿವೆ. ರೈತರ ಪ್ರಕಾರ ಸುಮಾರು 480 ಕೋಟಿ ಬಾಕಿ ಉಳಿದಿದೆ.ಸರ್ಕಾರದ ಪ್ರಕಾರ ಕೇವಲ 58 ಕೋಟಿ ರೂ.ಬಾಕಿ ಇದೆ.ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರು ಮತ್ತು ರೈತರ ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗದೇ ಹೋದರೆ ಪ್ರತಿಭಟನೆಗಳು ಮತ್ತಷ್ಟು ತೀವ್ರ ಸ್ವರೂಪಕ್ಕೇರುವ ಸಾಧ್ಯತೆಗಳಿವೆ.
ಬಿಜೆಪಿ ರೈತರ ಹೋರಾಟವನ್ನೇ ಗುರಿಯಾಗಿರಿಸಿಕೊಂಡು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದೆ.ಈ ಸಮಯದಲ್ಲಿ ಬೆಳಗಾವಿ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಈ ಮೊದಲು ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಕಟ್ಟಿ ಶಾಸಕರಾಗಿದ್ದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದರು.ಆ ವೇಳೆ ಬೆಳಗಾವಿ ಅಧಿವೇಶನ ನಡೆದಿತ್ತು.ಯಡಿಯೂರಪ್ಪ ಅವರು ಕಬ್ಬು ಬೆಳೆಗಾರರ ವಿಷಯವನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಿದ್ದರು.ಒಂದು ಹಂತದಲ್ಲಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವೆ ಕೈ ಕೈ ಮಿಲಾಯಿಸಿಬಿಡಬಹುದೇನೋ ಎಂಬ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.
ಯಡಿಯೂರಪ್ಪ ಅವರ ಕೋಪಾವೇಶಕ್ಕೆ ಸಿದ್ದರಾಮಯ್ಯ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.ಅಂದಿನಿಂದ ಯಡಿಯೂರಪ್ಪ ಅಧಿವೇಶನಕ್ಕೆ ಬರುವುದನ್ನೇ ಬಿಟ್ಟಿದ್ದರು.ಈಗ ರಾಜಕೀಯ ಪರಿಸ್ಥಿತಿ ಬದಲಾಗಿದೆ.ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದಿದ್ದಾರೆ. ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಿದ್ದು, ಒಂದು ಕಾಲದಲ್ಲಿ ದೋಸ್ತಿ ಸರ್ಕಾರದ ಪಾಲುದಾರರನ್ನೇ ಈ ಬಾರಿ ವಿರೋಧ ಪಕ್ಷದವರನ್ನಾಗಿ ಎದುರಿಸುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಬೆಳಗಾವಿ ಅಧಿವೇಶನದ ಕುತೂಹಲವನ್ನು ಹೆಚ್ಚಿಸಿದೆ.