ಕಾಲೇಜು ಕ್ಯಾಂಪಸ್ನೊಳಗೆ ವಿದ್ಯಾರ್ಥಿಗಳು ವಾಹನ ತರುವುದರ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರದ ಚಿಂತನೆ

ಬೆಂಗಳೂರು, ನ.20-ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳು ತಮ್ಮ ವಾಹನವನ್ನು ಕ್ಯಾಂಪಸ್‍ನೊಳಗೆ ತರುವುದರ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಪ್ರಸ್ತಾಪ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಿದ್ಧವಾಗುತ್ತಿದೆ.

ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡುವುದು ಹಾಗೂ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಈ ಹೊಸ ಪ್ರಸ್ತಾಪದ ಬಗ್ಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಶೀಘ್ರವೇ ಕಾಲೇಜು ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಲಿದ್ದಾರೆ. ವಾಯುಮಾಲಿನ್ಯವನ್ನು ತಗ್ಗಿಸುವುದು ಹಾಗೂ ಅಪಘಾತ ಪ್ರಮಾಣ ಕಡಿಮೆಗೊಳಿಸುವುದು ಇದರ ಉದ್ದೇಶವಾಗಿದೆ.
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಹಾಗು ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಲು ಜಿ.ಟಿ.ದೇವೇಗೌಡ ನಿರ್ಧರಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ವಾಹನವನ್ನು ಮನೆಯಲ್ಲಿಟ್ಟು ಸಾರ್ವಜನಿಕ ಸಾರಿಗೆಗಳನ್ನು ಅಥವಾ ಕಾಲೇಜು ಬಸ್‍ಗಳನ್ನು ಬಳಸಿದರೆ ವಾಯುಮಾಲಿನ್ಯವೂ ಕಡಿಮೆಯಾಗುತ್ತದೆ.ಬೆಂಗಳೂರಿನಂತಹ ನಗರಗಳಲ್ಲಿ ಮೆಟ್ರೋ ರೈಲು ಸೇವೆಯನ್ನು ಬಳಸಿದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಜಿ.ಟಿ.ದೇವೇಗೌಡರು ಕೂಡ ಇಲಾಖೆಯ ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‍ನಲ್ಲಿ ಸಾವಿರಾರು ವಾಹನಗಳು ಪಾರ್ಕಿಂಗ್ ಮಾಡುತ್ತಿರುವ ದೃಶ್ಯ ಕಂಡುಬರುತ್ತಿವೆ. ಇದು ಶೈಕ್ಷಣಿಕ ವಾತಾವರಣವನ್ನು ಕೆಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ವಾಹನಗಳ ಪೈಪೆÇೀಟಿಗೂ ಕಾರಣವಾಗುತ್ತಿದೆ ಎಂಬ ನಿರ್ಧಾರಕ್ಕೆ ಬಂದಿರುವ ಉನ್ನತ ಶಿಕ್ಷಣ ಇಲಾಖೆ ಕ್ಯಾಂಪಸ್‍ನೊಳಗೆ ವಾಹನ ನಿಷೇಧ ಎಂಬ ಪ್ರಸ್ತಾಪ ಸಿದ್ಧಪಡಿಸುತ್ತಿದೆ.

ಇತ್ತೀಚೆಗೆ ಸಚಿವರೊಂದಿಗೆ ಕಾಲೇಜೊಂದರ ಕಾರ್ಯಕ್ರಮಕ್ಕೆ ಹೋಗಿದ್ದೆವು. ಆಗ ಕ್ಯಾಂಪಸ್‍ನೊಳಗೆ ಹಾಗೂ ಹೊರಗೆ ಸಾವಿರಾರು ವಾಹನಗಳು ನಿಂತಿರುವುದು ಕಂಡುಬಂತು. ಈ ಬಗ್ಗೆ ಸಚಿವರು ವಿಚಾರಿಸಿದಾಗ ಅವೆಲ್ಲವೂ ವಿದ್ಯಾರ್ಥಿಗಳ ವಾಹನ ಎಂದು ತಿಳಿದುಬಂತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಭೆ ಮುಗಿಸಿ ಬರುವಾಗ ಇಂತಹ ವ್ಯವಸ್ಥೆಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಚಿವರು, ಈ ಬಗ್ಗೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆಯುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರತಿ ವಿದ್ಯಾರ್ಥಿ ತನ್ನ ವಾಹನ ನಿರ್ವಹಣೆಗೆ 5 ಸಾವಿರ ರೂ.ಗಳಿಗೆ ಖರ್ಚು ಮಾಡುತ್ತಾರೆ.ಇದರ ಬದಲು ಕಾಲೇಜು ವಾಹನಕ್ಕೆ ವಾರ್ಷಿಕ ಇಂತಿಷ್ಟು ಎಂದು ನೀಡಿದರೆ ವರ್ಷವಿಡೀ ಕಾಲೇಜಿಗೆ ಹೋಗಬಹುದು.ಇದರಿಂದ ಆರ್ಥಿಕ ಹೊರೆಯೂ ಕಡಿಮೆ ಆಗುವುದರೊಂದಿಗೆ ವಾಯು ಮಾಲಿನ್ಯವೂ ಕಡಿಮೆಯಾಗುತ್ತದೆ.ಈ ಬಗ್ಗೆ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಸ್ತಾಪಕ್ಕೆ ಕಾಲೇಜು ಆಡಳಿತ ಮಂಡಳಿಯವರು ಒಪ್ಪಿಗೆ ಸೂಚಿಸಿದರೆ ಮುಂದಿನ ವರ್ಷದಿಂದ ಕಾಲೇಜು ಕ್ಯಾಂಪಸ್‍ನೊಳಗೆ ವಾಹನ ಪ್ರವೇಶ ಬಂದ್ ಆಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ