ರೈತರ ಬೇಡಿಕೆಗಳಿಗೆ ಇಂದೇ ಸರ್ಕಾರ ಸ್ಪಂದಿಸದಿದ್ದರೆ ನಾಳಿನÀ ಮುಖ್ಯಮಂತ್ರಿಗಳ ಸಭೆಗೆ ರೈತರು ಭಾಗವಹಿಸುವುದಿಲ್ಲ: ರೈತ ಸಂಘಟನೆ ಎಚ್ಚರಿಕೆ

ಬೆಂಗಳೂರು,ನ.19-ರೈತರ ಬೇಡಿಕೆಗಳಿಗೆ ಇಂದೇ ಸರ್ಕಾರ ಸ್ಪಂದಿಸದಿದ್ದರೆ ನಾಳೆ ನಡೆಯಲಿರುವ ಮುಖ್ಯಮಂತ್ರಿಗಳ ಸಭೆಗೆ ಯಾವುದೇ ರೈತರು ಭಾಗವಹಿಸುವುದಿಲ್ಲ ಎಂದು ರೈತ ಸಂಘಟನೆ ಮುಖಂಡ ಚಾಮರಸ ಮಾಲಿ ಪಾಟೀಲ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಕಬ್ಬಿನ ಸಮಸ್ಯೆ ಪರಿಹರಿಸುವಂತೆ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.ಆದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ದೂರಿದರು.

ನಾವು ಮುಂದಿಟ್ಟಿರುವ ಬೇಡಿಕೆಗಳನ್ನು ಸರ್ಕಾರ ಇಂದೇ ಈಡೇರಿಸಬೇಕು. ಇಲ್ಲದಿದ್ದರೆ ನಾಳೆ ಕರೆದಿರುವ ಸಭೆಗೆ ಯಾವುದೇ ಸಂಘಟನೆಗಳ ಮುಖಂಡರು ಬರುವುದಿಲ್ಲ. ಸಭೆಯನ್ನು ಬಹಿಷ್ಕರಿಸಲು ನಾವು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರು ಯಾವುದೇ ಪಕ್ಷದಲ್ಲಿದ್ದರೂ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದು ನಿಮ್ಮ ಕರ್ತವ್ಯ. ನಾನು ಮುಖ್ಯಮಂತ್ರಿಯಾಗಿ ಐದು ತಿಂಗಳಾಯ್ತು ಎಂದು ಹೇಳುತ್ತಿರುವುದು ಪಲಾಯನವಾದ. ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ನಿಮಗೆ ಸಮಸ್ಯೆಯ ಅರಿವು ಇಲ್ಲವೇ ಎಂದು ಪ್ರಶ್ನಿಸಿದರು.

ರೈತ ಮುಖಂಡ ಕೆ.ಪಿ.ಗಂಗಾಧರ್ ಮಾತನಾಡಿ, ಪ್ರತಿಭಟನೆ ನಡೆಸುವವರು ಗೂಂಡಾಗಳು ನಿಜವಾದ ರೈತರು ಅಲ್ಲವೇ ಅಲ್ಲ ಎಂದು ಮುಖ್ಯಮಂತ್ರಿ ಹೇಳುವ ಮೂಲಕ ನಾಡಿನ ಅನ್ನದಾತರಿಗೆ ಅಪಮಾನ ಮಾಡಿದ್ದಾರೆ. ನಿಮ್ಮ ರಾಜಕೀಯ ನಿಲುವುಗಳು ಏನೇ ಇರಲಿ ಇಂಥ ವಿಷಯದಲ್ಲಿ ನೀವು ರಾಜಕೀಯ ಬೆರೆಸಿದ್ದು ಸರಿಯಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅದರಲ್ಲೂ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯ ವಿರುದ್ಧ ಇಷ್ಟು ಹಗುರವಾಗಿ ಮಾತನಾಡಿರುವುದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುವಂಥದಲ್ಲ. ಪ್ರತಿಭಟನಾನಿರತರನ್ನು ಮಾತುಕತೆ ಮೂಲಕ ಮನವೊಲಿಸಿ ಸಂಧಾನ ನಡೆಸುವ ಅವಕಾಶವಿತ್ತು. ಯಾವ ಕಾರಣಕ್ಕಾಗಿ ಆ ಮಹಿಳೆ ವಿರುದ್ಧ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿರುವ ಅವಮಾನ ಒಂದು ಹೆಣ್ಣುಮಗಳಿಗೆ ಸೇರಿದ್ದಲ್ಲ ಇಡೀ ನಾಡಿನ ಅನ್ನದಾತರಿಗೆ ಮಾಡಿದ ಅಪಮಾನ. ತಕ್ಷಣವೇ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದರು.
ರೈತರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವುದು ಅಸಾಧ್ಯವೇನಲ್ಲ. ನಿಮಗೆ ಇಚ್ಛಾಶಕ್ತಿ ಇದ್ದರೆ ಒಂದು ದಿನದಲ್ಲಿ ಸಮಸ್ಯೆ ಇತ್ಯರ್ಥಪಡಿಸಬಹುದು. ಪ್ರತಿಭಟನೆ ನಡೆಸುವವರನ್ನೇ ಯಾವ ಪಕ್ಷಕ್ಕೆ ಸೇರಿದ್ದೀರಿ ಎನ್ನುವ ಮುಖ್ಯಮಂತ್ರಿಗೆ ಆಡಳಿತದ ಅನುಭವದ ಕೊರತೆ ಇದೆ ಎಂದು ದೂರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ