ರೈತರ ಬೇಡಿಕೆ ಸಂಜೆಯೊಳಗೆ ಈಡೇಸದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಉಗ್ರ ಹೋರಾಟ: ಬಿಜೆಪಿ ಎಚ್ಚರಿಕೆ

ಬೆಂಗಳೂರು,ನ.19-ರೈತರು ಮುಂದಿಟ್ಟಿರುವ ಬೇಡಿಕೆಗಳನ್ನು ಇಂದು ಸಂಜೆಯೊಳಗೆ ಸರ್ಕಾರ ಈಡೇಸದಿದ್ದರೆ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಸಿದೆ.

ಕಬ್ಬು ಬೆಳೆಗಾರರ ಬಾಕಿ ಹಣ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಅವರ ಬೇಡಿಕೆಗಳನ್ನು ಇಂದು ಸಂಜೆಯೊಳಗೆ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟಗಳ ಬಗ್ಗೆ ನಾಳೆ ಸಭೆ ಕರೆದು ರೂಪುರೇಷೆಗಳನ್ನು ಸಿದ್ಧಪಡಿಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಆದ್ಯಕರ್ತವ್ಯ.ಪ್ರತಿಭಟನೆ ನಡೆಸುತ್ತಿರುವವರು ಯಾವ ಪಕ್ಷದವರು, ಅವರು ನಮಗೆ ವೋಟ್ ಹಾಕಿದ್ದಾರೆಯೇ ಇಲ್ಲವೇ ಎಂಬುದು ಮುಖ್ಯವಲ್ಲ. ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಘೋಷಿಸಬೇಕು. ಇಲ್ಲ ನಾಳೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ಬೆಳಗಾವಿಯ ಅಧಿವೇಶನದ ಒಳಗು ಮತ್ತು ಹೊರಗೂ ಹೋರಾಟ ನಡೆಸಲು ಪಕ್ಷ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.

ಕಾರ್ಖಾನೆ ಮಾಲೀಕರು ಯಾರೇ ಇರಲಿ ರೈತರ ಬಾಕಿ ಹಣವನ್ನು ಉಳಿಸಿಕೊಂಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ತಮ್ಮ ಅಭ್ಯಂತರವೇನಿಲ್ಲ. ಬೇಡಿಕೆ ಈಡೇರಿಸಬೇಕೆಂದು ಹೋರಾಟ ನಡೆಸಿದರೆ ಅವರ ಮೇಲೆ ದಬ್ಬಾಳಿಕೆ ನಡೆಸಿ ಪೆÇಲೀಸರಿಂದ ಲಾಠಿ ಪ್ರಹಾರ ನಡೆಸುತ್ತೀರಿ. ಇದೇನಾ ಸರ್ಕಾರ ನಡೆಸುವ ರೀತಿನೀತಿ ಎಂದು ಪ್ರಶ್ನಿಸಿದರು.

ಒಬ್ಬ ಮಹಿಳೆಯನ್ನು ಈವರೆಗೂ ಎಲ್ಲಿ ಮಲಗಿದ್ದೆ ಎಂದು ಕೇಳುವ ಮೂಲಕ ಸಮಸ್ತ ಮಹಿಳೆಯರಿಗೆ ಮುಖ್ಯಮಂತ್ರಿ ಅವಮಾನ ಮಾಡಿದ್ದಾರೆ. ತಕ್ಷಣವೇ ಅವರ ಕ್ಷಮೆ ಕೇಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮಗೆ ಮಹಿಳೆಯರ ಬಗ್ಗೆ ಹೇಗೆ ಮಾತನಾಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲವೇ ಎಂದು ಹರಿಹಾಯ್ದರು.

ಇನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ತಮ್ಮ ಮಗನ ಪರ ವಕಾಲತ್ತು ವಹಿಸುತ್ತಿರುವುದು ದುರದೃಷ್ಟಕರ. ಕೊನೆ ಪಕ್ಷ ಅವರಾದರೂ ಮಗನ ಕಿವಿ ಹಿಂಡಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಬೇಕಿತ್ತು. ಆದರೆ ಅವರನ್ನೇ ಸಮರ್ಥಿಸಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.

ರೈತರ ಸಮಸ್ಯೆಗಳನ್ನು ಪರಿಹರಿಸಲು ನಾವು ಪ್ರಿಂಟಿಂಗ್ ಮಿಷನ್ ಇಟ್ಟುಕೊಂಡಿಲ್ಲ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳುತ್ತಿದ್ದಾರೆ. ನಾವೇನಾದರೂ ನೀವು ಪ್ರಿಂಟಿಂಗ್ ಮಿಷನ್ ಇಟ್ಟುಕೊಂಡಿದ್ದೀರ ಎಂದು ಹೇಳಿದ್ದವಾ? ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಾ ಕಳೆದ ನಾಲ್ಕೈದು ತಿಂಗಳಿನಿಂದ ಬೊಬ್ಬೆ ಹೊಡೆಯುತ್ತಿರುವವರು ಯಾರು ಎಂದು ಪ್ರಶ್ನಿಸಿದರು.

ನಾಡಿನ ಅನ್ನದಾತ ಇಂದು ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದ್ದಾನೆ. ಕೂಡಲೇ ಕಾರ್ಖಾನೆಗಳ ಮಾಲೀಕರು, ರೈತ ಪ್ರತಿನಿಧಿಗಳ ಸಭೆ ಕರೆದು ಸಮಸ್ಯೆಯನ್ನು ಸರ್ಕಾರ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಮನವಿ ಮಾಡಿದರು.

ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ ಮಾತನಾಡಿ, ಪ್ರಾರಂಭದಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ ಕಾರ್ಖಾನೆ ಮಾಲೀಕರು ಯಾವುದೇ ಪಕ್ಷದಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ನೆರೆಯ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವ ಮುನ್ನವೇ ಅಲ್ಲಿನ ಸರ್ಕಾರ ಕಾರ್ಖಾನೆ ಮಾಲೀಕರು, ರೈತ ಪ್ರತಿನಿಧಿಗಳು ಸರ್ವಪಕ್ಷಗಳ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸುತ್ತಾರೆ. ಆದರೆ ನಮ್ಮಲ್ಲಿ ಬೆಂಕಿಗೆ ಗುಡ್ಡ ಬಿದ್ದಾಗ ಬಾವಿ ತೋಡುವ ಪ್ರವೃತ್ತಿ ಇದೆ ಎಂದು ವ್ಯಂಗ್ಯವಾಡಿದರು.

ಇದುವರೆಗೂ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಪ್ರಿಂಟಿಂಗ್ ಮಿಷನ್ ಇಟ್ಟುಕೊಂಡಿರಲಿಲ್ಲ. ಆದರೆ ಸಚಿವ ರೇವಣ್ಣ ನಮ್ಮ ಹತ್ತಿರ ಪ್ರಿಂಟಿಂಗ್ ಮಿಷನ್ ಇಲ್ಲ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಮೊದಲು ರೈತರ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ