ದರ್ಶಿನಿಗಳು, ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್, ಪಬ್, ಕ್ಲಬ್‍ಗಳಲ್ಲಿ ಧೂಮಪಾನ ನಿಷೇಧ: ಸಚಿವ ಯು.ಟಿ.ಖಾದರ್

ಬೆಂಗಳೂರು, ನ.19-ನಗರಸಭೆ ಮತ್ತು ಪುರಸಭೆ ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ದರ್ಶಿನಿಗಳು, ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್, ಪಬ್, ಕ್ಲಬ್‍ಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ತಂಬಾಕು ನಿಯಂತ್ರಣ ಕುರಿತ ಆರೋಗ್ಯ ಇಲಾಖೆ ಮತ್ತು ನಗರಾಭಿವೃಧ್ಧಿ ಇಲಾಖೆಯೊಂದಿಗೆ ಜಂಟಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನದಟ್ಟಣೆ ಹೆಚ್ಚಾಗಿರುವ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿದೆ. ತಂಬಾಕು ಸೇವನೆಯಿಂದ ಹಲವು ರೀತಿಯ ದೀರ್ಘಾವಧಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತಿರುವುದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಒಂದು ವೇಳೆ ಧೂಮಪಾನಕ್ಕೆ ಕಾನೂನು ಬಾಹಿರವಾಗಿ ಅವಕಾಶ ಮಾಡಿ ಕೊಟ್ಟಿದ್ದೇ ಆದರೆ, ಅಂತಹ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದರು.

ಇಂದಿನ ಸಭೆಯಲ್ಲಿ ಧೂಮಪಾನ ನಿಷೇಧ ಮಾಡಲು ಬೇರೆ ಬೇರೆ ಇಲಾಖೆ ಸಹಾಯ ಪಡೆಯುವ ಬಗ್ಗೆಯೂ ಚರ್ಚಿಸಲಾಗಿದೆ. ಗೃಹ ಇಲಾಖೆ ಮತ್ತು ಕಾನೂನು ಇಲಾಖೆ ಜವಾಬ್ದಾರಿಯು ಮುಖ್ಯವಾಗಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ಹೆಚ್ಚುವುದನ್ನು ತಡೆಗಟ್ಟಬೇಕಿದೆ.

ಇದುವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ನಿಷೇಧವಿತ್ತು. ಇದೀಗ ರಾಜ್ಯಾದ್ಯಂತ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ವಿಮಾನ ನಿಲ್ದಾಣದಲ್ಲೂ ಕೂಡ ಆಲ್ಕೋಹಾಲ್ ಮತ್ತು ತಂಬಾಕು ವಸ್ತುಗಳಿಗೆ ತೆರಿಗೆ ವಿನಾಯ್ತಿ ಬೇಡವೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಈಗಾಗಲೇ ಗುಟ್ಕಾ ನಿಷೇಧವಿದ್ದು, ಹುಕ್ಕಾ ಬಾರ್‍ಗೂ ನಿಷೇಧವಿದೆ. ಕೋಟ್ಪಾ ಕಾಯ್ದೆ ಪ್ರಕಾರ 30ಕ್ಕೂ ಹೆಚ್ಚು ಆಸನವಿರುವ ಬಾರ್ ಅಂಡ್ ರೆಸ್ಟೋರೆಂಟ್, ಪಬ್‍ಗಳಲ್ಲಿ ಧೂಮಪಾನ ಪ್ರದೇಶವನ್ನು ಸ್ಥಾಪಿಸಲು ಕಾನೂನಡಿಯಲ್ಲಿ ಅವಕಾಶವಿದೆ. ಆದರೆ ಅಪ್ರಾಪ್ತರಿಗೆ, ಧೂಮಪಾನ ಮಾಡದ ಸಾರ್ವಜನಿಕರಿಗೆ ಅಲ್ಲಿ ಪ್ರವೇಶವಿರಬಾರದು. ಧೂಮಪಾನವಲಯದಲ್ಲಿ ಯಾವುದೇ ರೀತಿಯ ತಿಂಡಿ ಊಟ, ಕಾಫಿ ಸರಬರಾಜು ಮಾಡತಕ್ಕದ್ದಲ್ಲ ಎಂಬ ನಿಷೇಧವನ್ನು ಆದೇಶದಲ್ಲಿ ಹೊರಡಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೂ ಈ ಬಗ್ಗೆ ಕಾನೂನು ಉಲ್ಲಂಘನೆಯಾದರೆ ಅಂತಹ ಉದ್ದಿಮೆಗಳ ಪರವಾನಗಿ ರದ್ದು ಪಡಿಸಲು ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಆದೇಶದಲ್ಲಿ ತಿಳಿಸಲಾಗಿದೆ.

ಏಕಾಏಕಿ ಗೋವಾ ಸರ್ಕಾರ ರಾಜ್ಯದ ಮೀನುಗಳನ್ನು ನಿಷೇಧಿಸಿದೆ. ಗೋವಾ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಐಸಿಎಂಆರ್ ಅಧ್ಯಕ್ಷ ಪ್ರಶಾಂತ್ ಠಾಕೂರ್, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅಮೆರಿಕ ಡಾ.ಆರ್.ಬೆಂಜಮಿನ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ