ಬೆಂಗಳೂರು,ನ.19-ಶೌಚಾಲಯವಿಲ್ಲದೆ ಐದು ಲಕ್ಷ ಕುಟುಂಬಗಳಿಗೆ ಹೆಚ್ಚುವರಿಯಾಗಿ ಶೌಚಾಲಯ ನಿರ್ಮಾಣ ಮಾಡುವ ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಭೆರೇಗೌಡ ಇಂದಿಲ್ಲಿ ತಿಳಿಸಿದರು.
ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಗಾಂಧಿ ಪ್ರತಿಮೆ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಯಲು ಬಹಿರ್ದೆಸೆ ಮುಕ್ತ ಗ್ರಾಮೀಣ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸ್ವಚ್ಛ ಭಾರತದಡಿ 45 ಲಕ್ಷ ಶೌಚಾಲಯಗಳನ್ನು ಹಾಗೂ ನಿರ್ಮಲ ಭಾರತ ಯೋಜನೆಯಡಿ 25 ಲಕ್ಷ ಶೌಚಾಲಯ ಒಳಗೊಂಡಂತೆ ಒಟ್ಟು 70,20,000 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ಕಳೆದ ನಾಲ್ಕು ವರ್ಷಗಳಲ್ಲಿ 45 ಲಕ್ಷ ಶೌಚಾಲಯ ನಿರ್ಮಿಸಲಾಗಿದ್ದು, ಮುಂದಿನ ವರ್ಷ ಏಪ್ರಿಲ್ ಅಂತ್ಯದ ವೇಳೆಗೆ ಶೌಚಾಲಯ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಅದನ್ನು ಈಗಾಗಲೇ ಸರಿಗಟ್ಟಿದ್ದು, ಒಂದೂವರೆ ತಿಂಗಳ ಮೊದಲೇ ಗುರಿ ಮುಟ್ಟಿದ್ದೇವೆ ಎಂದರು.
ಮುಂದಿನ ಒಂದು ವರ್ಷದಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಲ್ಲಿ ಸತ್ಯಮೇವ ಜಯತೇ ಅಭಿಯಾನ, ಶೌಚಾಲಯವಾಗಲಿ ಸ್ವಚ್ಛಾಲಯ ಎಂಬ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಇದರೊಂದಿಗೆ ಕಸ ನಿರ್ವಹಣೆಗೂ ಒಂದು ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ ಎಂದರು.