ಬೆಂಗಳೂರು, ನ.19- ವೈಟ್ಫೀಲ್ಡ್ನ ಕೆಟಿಬಿಒ ಟ್ರೇಡ್ ಸೆಂಟರ್ನಲ್ಲಿ ಆಯೋಜನೆಗೊಂಡಿದ್ದ 7ನೆ ವರ್ಷದ ಮಾರುತಿ ಸುಜುಕಿ ಅರೇನಾ ಬೆಂಗಳೂರು ಕಾಮಿಕ್ ಕಾನ್ ಉತ್ಸವದಲ್ಲಿನ ಕಾಸ್ಪ್ಲೇ ಸ್ಪರ್ಧೆಯಲ್ಲಿ ನಗರದ ಶಬಾನ್ ಅಹ್ಮದ್ 50 ಸಾವಿರ ನಗದು ಬಹುಮಾನ ಪಡೆಯುವ ಮೂಲಕ 2019ರಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಸ್ಪರ್ಧೆಯನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ಶನಿವಾರ ಆರಂಭಗೊಂಡ ವರ್ಣರಂಜಿತ ಉತ್ಸವ ಎರಡನೆ ದಿನವಾದ ನಿನ್ನೆ ಸಾವಿರಾರು ಕಾಮಿಕ್ ಪ್ರೇಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಭಾರತೀಯ ಕಾಮಿಕ್ ಲೇಖಕರಾದ ಸುಮಿತ್ ಕುಮಾರ್ ಅವರ ಜನಪ್ರಿಯ ವೆಬ್ಕಾಮಿಕ್ ಸರಣಿ ಬಕರ್ ಮ್ಯಾಕ್ಸ್ ಮುದ್ರಿತ ಸಂಪುಟ , ಕಲಾವಿದ ಮತ್ತು ಲೇಖಕ ವಿವೇಕ್ ಗೋಯಲ್ ಅವರ ಕ್ಯಾಸ್ಟರ್ ಅಂಡ್ ದಿ ಏಜ್ ಆಫ್ ಇಮ್ಮಾರ್ಟಲ್, ಶಮಿಕ್ ದಾಸ್ ಗುಪ್ತ ಅವರ ರಕ್ಷಕ್ ಮತ್ತು ದಿ ವಿಲೇಜ್ ಕೃತಿಗಳು ಬಿಡುಗಡೆಗೊಂಡವು.
ಇದೇ ವೇಳೆ ಕಲಾವಿದೆ ವನೇಸಾ.ಆರ್.ಡೆಲ್ ರೇ ಇಮೇಜ್ ಕಾಮಿಕ್ ಪರಿಕಲ್ಪನೆ ಹಾಗೂ ತಮ್ಮ ಅನುಭವ ಸಾಧನೆಗಳನ್ನು ಹಂಚಿಕೊಂಡರು. ಹೆಸರಾಂತ ವೀಡಿಯೋ ಜಾಕಿ ಲ್ಯೂಕ್ ಕೆನ್ನಿ ಅಭಿಮಾನಿಗಳ ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಇದರೊಂದಿಗೆ ಹಾಸ್ಯ ಕಲಾವಿದ ಸಪನ್ ವರ್ಮ ಕಾಮಿಕ್ ಪ್ರಿಯರಿಗೆ ಮನರಂಜನೆಯ ಮುದ ನೀಡಿದರು.
ಎರಡು ದಿನಗಳ ಈ ಉತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಡಿಸಿ ಕ್ಯಾಮಿಕ್ಸ್ , ಪೆಂಗ್ವಿನ್ ರ್ಯಾಂಡಂ ಹೌಸ್ ಆಫ್ ಇಂಡಿಯಾ ಮತ್ತಿತರ ಸಂಸ್ಥೆಗಳು ಭಾಗವಹಿಸಿದ್ದವು.
ಕಾಮಿಕಾನ್ ಇಂಡಿಯಾ ಸಂಸ್ಥಾಪಕ ಜತಿನ್ ವರ್ಮ ಮಾತನಾಡಿ, ಬೆಂಗಳೂರಿನ ಕಾಮಿಕ್ ಪ್ರಿಯರು ನಮ್ಮ ಉತ್ಸವಕ್ಕೆ ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ. ನಾವು ಮುಂದಿನ ವರ್ಷ ಇನ್ನಷ್ಟು ಹೊಸತನದೊಂದಿಗೆ ಬೆಂಗಳೂರಿಗೆ ಆಗಮಿಸಲಿದ್ದೇವೆ ಎಂದು ಹೇಳಿದರು.