ಸಮಾಜಮುಖಿ ಕಾರ್ಯಕ್ರಮಗಳಿಗೆ ಸಿಎಂಆರ್ ಗ್ರೂಪ್‍ನ ಕಾರ್ಯಕ್ರಮಗಳೇ ಸಾಕ್ಷಿ: ಸಚಿವ ಸಿ.ಎಸ್.ಪುಟ್ಟರಾಜು

ಬೆಂಗಳೂರು,ನ.19- ಸಮಾಜಮುಖಿ ಕಾರ್ಯಕ್ರಮಗಳಿಗೆ ಸಿಎಂಆರ್ ಗ್ರೂಪ್‍ನ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ. ಸಮಾಜಕ್ಕೆ ಒಳ್ಳೆಯದಾಗಬೇಕೆಂದು ಮನಸು ಮಾಡಿದರೆ ಒಳ್ಳೆಯ ಕೆಲಸಗಳು ಮೂಡಿ ಬರುತ್ತವೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಇಂದಿಲ್ಲಿ ತಿಳಿಸಿದರು.

ನಗರದ ಸಿಎಂಆರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಇಂದು ಬೆಂಗಳೂರಿನಂತಹ ನಗರದಲ್ಲಿ ಒಂದು ಉನ್ನತ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ಶ್ಲಾಘನೀಯ ಎಂದರು.

ವೈಚಾರಿಕ ಜಗತ್ತಿನಲ್ಲಿ ನಮ್ಮ ಯುವ ಪ್ರತಿಭೆಗಳು ಸಮಾಜಮುಖಿಯಾಗಿ ನಿಲ್ಲಿಸುವಂತಹ ಕೆಲಸವನ್ನುಕಾಲೇಜು ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಇದೊಂದು ವಿಶೇಷ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರವಿರುತ್ತದೆ. ಅದಕ್ಕೆ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರ ಹಿಂದಿರುವ ಅವರ ಪತ್ನಿಯ ಪರಿಶ್ರಮವೂ ಇದೆ. ಒಬ್ಬ ಮಾರ್ಗದರ್ಶಿಯಾಗಿ ಸಂಸ್ಥೆಯ ಅಧ್ಯಕ್ಷರಾಗಿ, ರಾಜ್ಯಸಭಾ ಸದಸ್ಯರಾಗಿ ಕೆ.ಸಿ.ರಾಮಮೂರ್ತಿ ಮಾಡುತ್ತಿರುವ ಕೆಲಸದಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಸಮಾಜದಲ್ಲಿ ಏನು ನಡೆಯುತ್ತದೆ ಎಂಬುದನ್ನು ಅರಿಯುತ್ತಾ ಬೆಳೆಯಬೇಕು. ಜ್ಞಾನ ಹೆಚ್ಚಿಸಿಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ತಿಳಿಸಿದರು.
ಶಿಕ್ಷಣದ ಜೊತೆ ಕ್ರೀಡೆ ಮತ್ತಿತರ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಮುನ್ನೆಡೆಯಬೇಕು ಎಂದು ಸಲಹೆ ಮಾಡಿದರು.

ಕಾಲೇಜಿನ ಅಧ್ಯಕ್ಷರಾದ ಕೆ.ಸಿ.ರಾಮಮೂರ್ತಿ ಮಾತನಾಡಿ, ಕಾಲೇಜಿಗೆ ಕೀರ್ತಿ ತಂದುಕೊಡುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ನುಡಿದರು.
ಇದೇ ವೇಳೆ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿಗೆ ಭಾಜನರಾದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ರಾಜು ರೆಡ್ಡಿ, ಜಗನ್ನಾಥ ರೆಡ್ಡಿ, ಮಾಜಿ ಕ್ರಿಕೆಟಿಗ ದೊಡ್ಡ ನರಸಯ್ಯ ಗಣೇಶ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ