ಜೈಪುರ: ರಾಜಸ್ತಾನ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ವಂಚಿತರಾದ ರಾಮ್ಗರ್ ಶಾಸಕ ಜ್ಞಾನ್ ದೇವ್ ಅಹುಜಾ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಬಿಜೆಪಿ ತಮಗೆ ಟಿಕೆಟ್ ನಿರಾಕರಿಸಿರುವ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಅಹುಜಾ ಬಿಜೆಪಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಹುಜಾ ಜತೆಗೆ ಬಿಜೆಪಿಯಿಂದ ಟಿಕೆಟ್ ವಂಚಿತರಾದ ಹಲವು ಶಾಸಕರು ಮತ್ತು ರಾಜ್ಯ ಸಚಿವರೊಬ್ಬರು ಪಕ್ಷ ತೊರೆದಿದ್ದಾರೆ.
ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನನ್ನ ಹೆಸರನ್ನು ಕೈಬಿಡಲಾಗಿದೆ. ನನ್ನ ಹೆಸರನ್ನು ಕೈಬಿಟ್ಟರೇಕೆ ಎಂದು ಕೂಡ ಕಾರಣ ನೀಡಲಿಲ್ಲ. ನನ್ನ ಬೆಂಬಲಿಗರು ಮತ್ತು ಕುಟುಂಬ ಸದಸ್ಯರ ಒತ್ತಡದಿಂದಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದೆ. ಸಂಗನೇರ್ ಕ್ಷೇತ್ರದಿಂದ ಟಿಕೆಟ್ ಕೇಳಿದೆ, ಆದರೆ ಪಕ್ಷದವರು ನೀಡಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಸಂಗನೇರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದಿರುವ ಅಹುಜಾ, ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಲಾಲ್ ಸೈನಿ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಡಿಸೆಂಬರ್ 7ರಂದು ನಡೆಯುವ ರಾಜಸ್ಥಾನ ಚುನಾವಣೆಗೆ ಕಳೆದವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಒಟ್ಟು ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಲಿರುವ ಪಕ್ಷ 200 ಅಭ್ಯರ್ಥಿಗಳಲ್ಲಿ 170 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ.
Rajasthan polls, denied ticket, BJP MLA Gyan Dev Ahuja quits party