ದೋಸ್ತಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರು

ಬೆಂಗಳೂರು,ನ.19- ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು, ರೈತರ ಸಂಪೂರ್ಣ ಸಾಲಮನ್ನಾ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಘೋಷಣೆ, ಗ್ರಾಮೀಣ ಪ್ರದೇಶಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಡಿನ ಅನ್ನದಾತರು ಇಂದು ರಾಜಧಾನಿ ಬೆಂಗಳೂರಿಗೆ ಲಗ್ಗೆ ಹಾಕುವ ಮೂಲಕ ದೋಸ್ತಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ಬಿಜಾಪುರ, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ರೈತರು ತಕ್ಷಣವೇ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ರಾಜ್ಯ ರೈತ ಸಂಘಟನೆ, ಕಬ್ಬು ಬೆಳೆಗಾರರ ಸಂಘ, ಹಸಿರುಸೇನೆ ಸೇರಿದಂತೆ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಕಳೆದ ರಾತ್ರಿ ಹಾಗೂ ಬೆಳಗೆಯಿಂದಲೇ ಬೆಂಗಳೂರಿಗೆ ಆಗಮಿಸಿದ ರೈತರು ಮೆಜೆಸ್ಟಿಕ್ ಸಮೀಪವಿರುವ ರೈಲ್ವೆ ನಿಲ್ದಾಣದ ಬಳಿ ಜಮಾವಣೆಗೊಂಡಿದ್ದರು. ಬಳಿಕ ಮೆಜೆಸ್ಟಿಕ್‍ನಿಂದ ಆನಂದರಾವ್ ವೃತ್ತದ ಫ್ಲೈಓವರ್ ಮೂಲಕ ಕೆ.ಆರ್.ವೃತ್ತದಿಂದ ವಿಧಾನಸೌಧಕಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರಾದರೂ ಪೆÇಲೀಸರು ಅದನ್ನು ವಿಫಲಗೊಳಿಸಿದರು.

ಮೆಜೆಸ್ಟಿಕ್‍ನಿಂದ ಮೆರವಣಿಗೆ ಹೊರಟ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸದೆ ಅನ್ನದಾತನ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತರು ಹಿಡಿಶಾಪ ಹಾಕಿದರು.

ತಕ್ಷಣವೇ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ತಕ್ಕ ಪಾಠ ಕಲಿಸಲಿದ್ದೇವೆ ಎಂದು ರೈತರು ಎಚ್ಚರಿಸಿದರು.
ಸಿಎಂ ವಿರುದ್ದ ಕೆಂಡ ಕಾರಿದ ರೈತರು:
ಇನ್ನು ನಿನ್ನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಭಟನಾನಿರತ ಮಹಿಳೆಯ ವಿರುದ್ಧ ಆಡಿದ ಮಾತಿಗೆ ರೈತ ಮುಖಂಡರು ಕಿಡಿಕಾರಿದರು.

ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರು ಮಹಿಳೆ ಬಗ್ಗೆ ಇಷ್ಟು ತುಚ್ಛವಾಗಿ ಮಾತನಾಡುವ ಅಗತ್ಯವಿರಲಿಲ್ಲ. ರೈತರು ಯಾವುದೇ ಪಕ್ಷಕ್ಕೂ ಸೇರಿರುವುದಿಲ್ಲ. ಜೆಡಿಎಸ್‍ಗೆ ಮತ ಹಾಕಿಲ್ಲ ಎಂಬ ಕಾರಣಕ್ಕಾಗಿ ಈ ರೀತಿ ಮಾತನಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಮೊದಲು ಕುಮಾರಸ್ವಾಮಿ ಈ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಾಳೆ ನಡೆಯಲಿರುವ ಕಬ್ಬು ಬೆಳೆಗಾರರ ಸಭೆಗೆ ನಾವ್ಯಾರು ಭಾಗವಹಿಸುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಮಹಿಳೆಯರ ಬಗ್ಗೆ ಈ ರೀತಿ ಮಾತನಾಡುವ ಮೂಲಕ ತಮ್ಮ ಕೀಳು ಅಭಿರುಚಿಯನ್ನು ಹೊರ ಹಾಕಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಬಾಕ್ಸ್:
ರೈತರ ಬೇಡಿಕೆಗಳೇನು
1. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು
2. ಗ್ರಾಮೀಣ ಪ್ರದೇಶದ ಆರ್ಥಿಕ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್
3. ರೈತರು ಬೆಳೆದ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು
4. ಕೃಷಿ ಸಾಲ ದೊರಕಿಸಲು ಸರಳ ಸಾಲ ನೀತಿ ಜಾರಿಗೆ ತರಬೇಕು
5. ಬ್ಯಾಂಕ್?ಗಳು ನೀಡುತ್ತಿರುವ ಕಿರುಕುಳಗಳನ್ನು ತಡೆಗಟ್ಟಬೇಕು
6. ಬರಪೀಡಿತ ಪ್ರತಿ ಕೃಷಿ ಕುಟುಂಬಕ್ಕೆ 10 ಸಾವಿರ ರೂ. ಜೀವನ ಭತ್ಯೆ
7. ಪ್ರತಿ ಹೆಕ್ಟೇರ್‍ಗೆ 25 ಸಾವಿರ ರೂ. ನಷ್ಟ ಪರಿಹಾರ ನೀಡಬೇಕು
8. ಬೆಂಬಲ ಬೆಲೆಯಲ್ಲಿ ಕೊಳ್ಳಲು ಖರೀದಿ ಕೇಂದ್ರ ಕೂಡಲೇ ತೆರೆಯಬೇಕು
9. ಕೊಡಗು ಪುನರ್ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು
10. ಪರಿಸರ ಉಳಿಸಲು ಅಲ್ಲಿನ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು
11. ರೈತರಿಗೆ ಬಗರ್ ಹುಕುಂ ಸಾಗುವಳಿ ಹಕ್ಕುಪತ್ರ ನೀಡಬೇಕು.
ಹೀಗೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.
ಬಾಕ್ಸ್
ಸಂಚಾರ ಅಸ್ತವ್ಯಸ್ತ: ಇಂದು ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಮೆಜೆಸ್ಟಿಕ್‍ಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಬಂದ್ ಮಾಡಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು.
ಸಾವಿರಾರು ಸಂಖ್ಯೆಯ ರೈತರು ಬೆಳಗ್ಗೆ ಮೆಜೆಸ್ಟಿಕ್‍ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆನಂದರಾವ್ ವೃತ್ತದ ಮೂಲಕ ಹೊರಟಿದ್ದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಯಿತು.
ಮೈಸೂರುಬ್ಯಾಂಕ್‍ನಿಂದ ಮೆಜೆಸ್ಟಿಕ್, ಮೆಜೆಸ್ಟಿಕ್‍ನಿಂದ ಯಲಹಂಕ, ಕೋರಮಂಗಲ,ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೇ ರೈತರು ಜಮಾವಣೆಗೊಂಡಿದ್ದರಿಂದ ಒಂದೇ ಒಂದು ವಾಹನವೂ ಚಲಿಸದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ರೈತರು ರಸ್ತೆಯಲ್ಲಿ ಪ್ರತಿಭಟನೆಗಿಳಿದ ಪರಿಣಾಮ ನಗರದಿಂದ ಹೊರ ಹೋಗುವ ಹಾಗೂ ಒಳಬರುವ ಬಿಎಂಟಿಸಿ, ಖಾಸಗಿ, ಆಟೋ, ಓಲಾ, ಊಬರ್, ದ್ವಿಚಕ್ರ ವಾಹನ, ಸರಕು ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ವಾಹನಗಳು ರಸ್ತೆಗಳಲ್ಲೇ ಗಂಟೆಗಟ್ಟಲೇ ನಿಲ್ಲಬೇಕಾಯಿತು.
ಕಚೇರಿಗೆ ತೆರಳಬೇಕಾಗಿದ್ದ ಉದ್ಯೋಗಿಗಳು ಅಲ್ಲಲ್ಲೇ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ