ನವದೆಹಲಿ: ಪ್ರಸ್ತುತ ದೇಶದ ಪರಿಸ್ಥಿತಿ 1975-77ರ ನಡುವಿನ ತುರ್ತು ಪರಿಸ್ಥಿತಿಗಿಂತಲೂ ದಾರುಣವಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ತಮ್ಮ ಕರ್ತವ್ಯದ ಬಗ್ಗೆ ಅನುಕಂಪ, ಅರಿವು ಇತ್ತು. ಆದರೆ ಇಂದಿನ ಪ್ರಧಾನಿ ಮೋದಿಯವರಿಗೆ ತಮ್ಮ ಕರ್ತವ್ಯದ ಬಗ್ಗೆ ಅನುಕಂಪವೇ ಇಲ್ಲ ಎಂದು ಖ್ಯಾತ ಪತ್ರಕರ್ತ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಟಾಟಾ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನ್ಯಾಯಾಂಗ ವ್ಯವಸ್ಥೆಯೊಳಗಿನ ಅಪಾಯ’ ಎಂಬ ವಿಚಾರದ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಪಕ್ಷಗಳೆಲ್ಲಾ ಒಗ್ಗೂಡಿ ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲಿ ಹೋರಾಡಿದರೆ ಪ್ರಧಾನಿ ಮೋದಿಯ ಸರ್ವಾಧಿಕಾರಿ ಧೋರಣೆಗೆ ಬ್ರೇಕ್ ಹಾಕಬಹುದು ಎಂದು ಶೌರಿ ಕರೆ ನೀಡಿದ್ದಾರೆ.
ದೇಶದ ಇಂದಿನ ಪರಿಸ್ಥಿತಿಗಿಂತ 1975-77ರ ನಡುವಿನ ತುರ್ತು ಪರಿಸ್ಥಿತಿಯೇ ಮೇಲು ಎಂದೆನಿಸುತ್ತದೆ. ಏಕೆಂದರೆ ಅಂದು ಇಂದಿರಾಗಾಂಧಿ ಅವರಿಗೆ ತಮ್ಮ ಕೃತ್ಯದ ಬಗ್ಗೆ ಅನುಕಂಪವಿತ್ತು. ಆದರೆ ಈಗಿನ ಪ್ರಧಾನಿಗೆ ಅದಿಲ್ಲ. ಅಂದು ಇಂದಿರಾಗಾಂಧಿ ಸುಮಾರು 75 ಸಾವಿರ ಮಂದಿಯನ್ನು ಜೈಲಿಗಟ್ಟಿದ್ದರು. ಆದರೆ ಅದಕ್ಕೊಂದು ಮಿತಿ ಇತ್ತು. ಅದನ್ನು ಇಂದಿರಾಗಾಂಧಿ ದಾಟಿರಲಿಲ್ಲ. ಆದರೆ ಇಂದಿನ ಪ್ರಧಾನಿಗೆ ತಮ್ಮ ಕೃತ್ಯದ ಬಗ್ಗೆ ಅನುಕಂಪವೇ ಇಲ್ಲ. ದೇಶದ ಪ್ರಮುಖ ಸಂಸ್ಥೆಗಳನ್ನೇ ಬುಡಮೇಲು ಮಾಡ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2014ರ ಸರ್ಕಾರಿ ವಿರೋಧಿ ಅಲೆಯಲ್ಲಿ ಮೋದಿ ಗೆದ್ದಿರಬಹುದು. ಆದರೂ ಅವರ ಮತ ಗಳಿಕೆ ಕೇವಲ ಶೇ.31ರಷ್ಟು ಮಾತ್ರ. ಅಂದರೆ ಶೇ.69ರಷ್ಟು ಮಂದಿ ಮೋದಿ ವಿರುದ್ಧವಾಗಿ ಮತ ಹಾಕಿದ್ದಾರೆ. ಇದರಿಂದಲೇ ತಿಳಿಯುತ್ತದೆ ಜನತೆಗೂ ಮೋದಿ ಮೇಲೆ ಸಂಪೂರ್ಣ ವಿಶ್ವಾಸವಿಲ್ಲ ಎಂಬುದು.
ಒಂದು ವೇಳೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದರೆ 2019ರ ಚುನಾವಣೆಯಲ್ಲಿ ಖಂಡಿತಾ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮಣಿಸಬಹುದು. ಒಂದು ವೇಳೆ ವಿಪಕ್ಷಗಳು ಈ ಬಗ್ಗೆ ಒಪ್ಪದಿದ್ದರೆ ವಿಪಕ್ಷಗಳ ಮತ ವಿಭಜನೆಯಾಗಿ ಮತ್ತೆ ಮೋದಿಗೆ ನೆರವಾಗುತ್ತದೆ. ಅದರಿಂದ ಈಗಿರುವ ದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದು ಕಳವಳವ್ಯಕ್ತಪಡಿಸಿದ್ದಾರೆ.
Situation Under Modi Government, Worse Than Emergency, Arun Shourie