ನಿಸರ್ಗ ಉಳಿವಿಗಾಗಿ ಒಂದು ಹಳ್ಳಿಯಾಗಲಿದೆ ರಾಷ್ಟ್ರೀಯ ಪ್ರಕೃತಿ ಮಾದರಿ ಗ್ರಾಮ

ಬೆಂಗಳೂರು, ನ.18-ನಿಸರ್ಗ ಉಳಿಸುವ ನಿಟ್ಟಿನಲ್ಲಿ ಒಂದು ಹಳ್ಳಿಯನ್ನು ರಾಷ್ಟ್ರೀಯ ಪ್ರಕೃತಿ ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ಭಾರತೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಪದವೀಧರರ ಸಂಘ ವಿಧಾನಸೌಧದಲ್ಲಿ ಆಯೋಜಿಸಿದ್ದ ಮೊದಲನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬತ್ತಿ ಹೋಗಿದ್ದ ಅಂರ್ತಜಲವನ್ನು ಮರುಸೃಷ್ಟಿಸಿ ಕಾಡನ್ನು ಬೆಳೆಸಿದ್ದಾರೆ. ಅದೇ ರಾಷ್ಟ್ರೀಯ ಪ್ರಕೃತಿ ಮಾದರಿ ಗ್ರಾಮವನ್ನುಮಾಡುವ ಭರವಸೆ ನೀಡಿದರು.

ಕಾಡನ್ನು ನಾಶ ಮಾಡಿ ನಾಡನ್ನಾಗಿ ಮಾಡಲಾಗುತ್ತಿದೆ. ಕಾಡು ನಾಶದಿಂದ ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಹಿಂದಿನ ಸರ್ಕಾರ ಗುತ್ತಿಗೆ ಆಧಾರದ ಆಯುಷ್ ಇಲಾಖೆ ವೈದ್ಯರ ನೇಮಕವನ್ನು ಖಾಯಂಗೊಳಿಸುವ ಭರವಸೆ ನೀಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗಮನಕ್ಕೆ ತಂದು ವೈದ್ಯರನ್ನು ಖಾಯಂಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸುಸಜ್ಜಿತ ಪ್ರಕೃತಿ ಚಿಕಿತ್ಸಾಲಯ ತೆರೆಯುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಸಾಲ ಮನ್ನಾಕ್ಕೆ ಹೆಚ್ಚಿನ ಅನುದಾನ ಬಳಕೆಯಾಗಿದ್ದು, ಅನ್ಠುbದಾನದ ಕೊರತೆ ಇದೆ. ಮುಂದಿನ ವರ್ಷ ಆಯುಷ್ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದರು.

ಆಲೋಪತಿ ಮತ್ತು ಆಯುಷ್ ವೈದ್ಯರನ್ನು ಜೊತೆಯಲ್ಲೇ ಕರೆದೊಯ್ಯುವ ಜವಾಬ್ದಾರಿ ತಮ್ಮ ಮೇಲೆ ಇದೆ ಎಂದ ಅವರು, ಭವಿಷ್ಯದಲ್ಲಿ ಪ್ರಕೃತಿ ಚಿಕಿತ್ಸಾ ದಿನಾಚರಣೆಯು ಜಾಗತಿಕ ಪ್ರಕೃತಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಮೊದಲ ಬಾರಿಗೆ ಪ್ರಕೃತಿ ಚಿಕಿತ್ಸಾ ದಿನಾಚರಣೆ ಆಚರಿಸುವುದಕ್ಕೆ ಅಭಿನಂದಿಸಿದ ಅವರು ನಿಸರ್ಗವೇ ಉತ್ತಮ ಚಿಕಿತ್ಸೆ ಪರಿಗಣಿಸಲಾಗುತ್ತದೆ. ಅದೇ ರೀತಿ ಉತ್ತಮ ವೈದ್ಯರೇ ಪ್ರಕೃತಿ ಇದ್ದಂತೆ ಎಂದು ಬಣ್ಣಿಸಿದರು.

ಏಕೀಕೃತ ವೈದ್ಯ ಪದ್ಧತಿಯಿಂದ ಉತ್ತಮ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಆಲೋಪತಿಯಲ್ಲಿ ವಾಸಿಯಾಗದ ರೋಗಗಳಿಗೆ ಆಯುಷ್ ಚಿಕಿತ್ಸಾ ವಿಧಾನಗಳ ಕಡೆಗೆ ಬರಲಾಗುತ್ತಿದೆ ಎಂದು ಹೇಳಿದರು.
ವ್ಯಾಸ ವಿವಿ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಮಾತನಾಡಿ, ಪ್ರಕೃತಿ ಚಿಕಿತ್ಸೆಯಲ್ಲಿ ಹೆಚ್ಚಿನ ಸಂಶೋಧನೆಗಳಾಗಬೇಕು, ರೋಗ ವಾಸಿ ಮಾಡುವುದಕ್ಕಿಂತ ರೋಗ ಬರದಂತೆ ತಡೆಯುವುದು ಮುಖ್ಯ. ಪಂಚ ಮಹಾಭೂತಗಳಲ್ಲಿ ಸಮತೋಲನ ಕಾಪಾಡುವುದೇ ಪ್ರಕೃತಿ ಚಿಕಿತ್ಸೆ ಎಂದರು.

ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ಪ್ರಕೃತಿ ಚಿಕಿತ್ಸೆಯಲ್ಲಿ ಮಹಾತ್ಮಗಾಂಧೀಜಿಯವರಿಗೆ ಅಪಾರ ನಂಬಿಕೆಯಿತ್ತು. ಪ್ರಕೃತಿಯಿಂದ ದೂರ ಸರಿದಷ್ಟು ರೋಗಗಳು ಹೆಚ್ಚಾಗುತ್ತಿದೆ. ಜಾಗತೀಕರಣದಿಂದ ಮನುಷ್ಯ ಸಂಬಂಧಗಳು ಬಿಗಡಾಯಿಸುತ್ತಿವೆ ಎಂದ ಅವರು, ದೇಸಿ ವೈದ್ಯಕೀಯ ಪದ್ಧತಿಯಲ್ಲಿ ಅಪಾರ ಶಕ್ತಿ ಇದ್ದು, ವೈಜ್ಞಾನಿಕವಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದ್ಠು ಪ್ರತಿಪಾದಿಸಿದರು.

ಭಾರತೀಯ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಪ್ರಶಾಂತ್‍ಶೆಟ್ಟಿ ಮಾತನಾಡಿ, ಪ್ರತಿ ತಾಲೂಕು ಆಸ್ಪತ್ರೆಗಳಲ್ಲೂ ಆಯುಷ್ ಘಟಕವನ್ನು ತೆರೆಯಬೇಕೆಂದು ಒತ್ತಾಯಿಸಿದರು.ಜಯದೇವ ಆಸ್ಪತ್ರೆಯಲ್ಲೂ ಸ್ವಾಯತ್ತವಾದ ಆಯುಷ್ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜೀವ್‍ಗಾಂಧಿ ವಿವಿ ಉಪಕುಲಪತಿ ಡಾ.ಎಸ್.ಸಚ್ಚಿದಾನಂದ, ಆಯುಷ್ ಇಲಾಖೆಯ ಆಯುಕ್ತರಾದ ಮೀನಾಕ್ಷಿ ನೇಗಿ, ಭಾರತೀಯ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ನವೀನ್ ಸೇರಿದಂತೆ ಪದಾಧಿಕಾರಿಗಳು, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ