ಕೃಷಿ ಮೇಳಕ್ಕೆ ತೆರೆ

ಬೆಂಗಳೂರು, ನ.18-ವಿಶ್ವದ ಗಮನ ಸೆಳೆದಿರುವ ಕೃಷಿ ಮೇಳಕ್ಕೆ ಇಂದು ತೆರೆಬಿದ್ದಿದೆ. ಕಳೆದ ಮೂರು ದಿನಗಳಿಂದ ನಡೆದ ಕೃಷಿ ಮೇಳವನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು.
ಕೇವಲ ಕರ್ನಾಟಕವಷ್ಟೇ ಅಲ್ಲದೆ, ವಿವಿಧ ರಾಜ್ಯಗಳ ರೈತರೂ ಕೂಡ ಕೃಷಿ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ವೈಜ್ಞಾನಿಕ ಅವಿಷ್ಕಾರಗಳು, ಆಧುನಿಕ ತಳಿ ಸೇರಿದಂತೆ ವಿವಿಧ ಬೆಳವಣಿಗೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಸಲುವಾಗಿ ದೇಶದಲ್ಲಿ ವೈವಿಧ್ಯಮಯವಾಗಿ ನಡೆಯುವ ಕೃಷಿ ಮೇಳವನ್ನು 1966ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೂ ಹಂತ ಹಂತವಾಗಿ ಕೃಷಿ ಮೇಳ ಯಶಸ್ವಿಯಾಗಿ ನಡೆಯುತ್ತಲೇ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಈ ಮೇಳ ರೈತರ ಹಬ್ಬವಾಗಿ ಪರಿಣಮಿಸಿದೆ. ಕರ್ನಾಟಕದ ಮೂಲೆ ಮೂಲೆಗಳಿಂದಲೂ ಬಸ್‍ಗಳಲ್ಲಿ ರೈತರು ಮೇಳಕ್ಕೆ ಆಗಮಿಸಿದ್ದಾರೆ. ನಿರೀಕ್ಷೆಗೂ ಮೀರಿ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಸುಮಾರು 12ಲಕ್ಷ ಜನ ಮೇಳಕ್ಕೆ ಭೇಟಿ ನೀಡಿದ್ದರು. ಈ ವರ್ಷ ಉದ್ಘಾಟನೆಯಾದ ಮೊದಲ ದಿನ 1.1 ಲಕ್ಷ, ಎರಡನೇ ದಿನ 2.5 ಲಕ್ಷ, ಮೂರನೇ ದಿನವಾದ ನಿನ್ನೆ 4 ಲಕ್ಷ, ಕೊನೆದಿನವಾದ ಇಂದು ಸರಿಸುಮಾರು ಅಂದಾಜು 5 ಲಕ್ಷ ಮಂದಿ ಭೇಟಿ ನೀಡಿದ್ದಾರೆ.

ಕಳೆದ ವರ್ಷಕ್ಕಿಂತಲೂ ಈ ವರ್ಷ ಇನ್ನೂ ಒಂದು ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಮೇಳದಲ್ಲಿ ಸುಮಾರು 5 ಕೋಟಿಗೂ ಅಧಿಕ ಆರ್ಥಿಕ ವಹಿವಾಟು ನಡೆದಿದೆ. ಮೊದಲನೇ ದಿನ 97 ಲಕ್ಷ , ಎರಡನೇ ದಿನ 1.50 ಕೋಟಿ, 3ನೇ ದಿನ 1.60 ಕೋಟಿ, ಕೊನೆ ದಿನವಾದ ಇಂದು ಸುಮಾರು ಒಂದು ಕೋಟಿಗೂ ಅಧಿಕ ವಹಿವಾಟು ನಡೆಯುವ ನಿರೀಕ್ಷೆ ಇದೆ.

ಕೃಷಿ ಮೇಳ ದಿನೇ ದಿನೇ ಸಾರ್ಥಕ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊಸ ತಳಿಗಳು, ಹೊಸ ಅವಿಷ್ಕಾರಗಳು ಅನಾವರಣಗೊಳ್ಳುತ್ತಿವೆ.
ಮೇಳದ ಹೈಲೈಟ್ಸ್:
ಕೃಷಿ ಮೇಳದ ಆರಂಭದಲ್ಲೇ ಪಶು ಸಂಗೋಪನೆಗೆ ಸಂಬಂಧಪಟ್ಟ ಮಳಿಗೆಗಳಿದ್ದು, ಅಲ್ಲಿಗೆ ಭೇಟಿ ನೀಡಿದರೆ ಜೀವವೈವಿಧ್ಯದ ಹೊಸ ಲೋಕವೇ ಅನಾವರಣಗೊಂಡಂತಿತ್ತು. ತರಹೇವಾರಿ ಕೃಷಿ ಸ್ನೇಹಿ ಪಶುಸಂಗೋಪನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿತ್ತು.

ಮೇಳದಲ್ಲಿ ಪ್ರಮುಖವಾಗಿ ಛತ್ತೀಸ್‍ಘಡ ಮೂಲದ ಕಟಕ್‍ನಾಥ್ ಕೋಳಿ ವಿಶೇಷ ಆಕರ್ಷಣೆಯಾಗಿತ್ತು. ಕಪ್ಪು ಬಣ್ಣದ ಈ ಕೋಳಿಯ ಮಾಂಸ ಕೂಡ ಕಪ್ಪಾಗಿರುವುದು ವಿಶೇಷ. ಶಕ್ತಿ ಸಾಮಥ್ರ್ಯ, ನರದೌರ್ಬಲ್ಯಕ್ಕೆ ಔಷಧೀಯ ಗುಣ ಹೊಂದಿರುವ ಈ ಕೋಳಿಯ ಮಾಂಸ ಛತ್ತೀಸ್‍ಗಡದಲ್ಲಿ ಅತ್ಯಂತ ಪ್ರಖ್ಯಾತಿ.
ಛತ್ತೀಸ್‍ಗಡದಲ್ಲಿ ಪೂಜಾನೀಯ ಸ್ಥಾನ ಪಡೆದ್ಟಿರುವ ಈ ಕೋಳಿ ಕರ್ನಾಟಕದಲ್ಲಿ ಅಪರೂಪ. ಕೃಷಿ ಮೇಳದಲ್ಲಿ ಇದರ ಪ್ರದರ್ಶನ ಮತ್ತು ಮಾಹಿತಿ ನೀಡಲಾಗಿತ್ತು.
ಗುಜರಾತ್ ಮೂಲದ ಗೀರ್ ತಳಿಯ ಹೋರಿಯು ಮೇಳದ ಮುಖ್ಯ ಆಕರ್ಷಣೆಯಾಗಿತ್ತು. ದೇಶದಲ್ಲಿ ಕೇವಲ 6 ಈ ತಳಿಯ ಹೋರಿಗಳಿದ್ದು, ಅದರಲ್ಲಿ ಕರ್ನಾಟಕದ ಕನಕಪುರ ತಾಲೂಕಿನಲ್ಲಿ ರೈತರೊಬ್ಬರು ಇದನ್ನು ಸಾಕಿದ್ದಾರೆ. ಉಳಿದಂತೆ ವಿವಿಧ ತಳಿಯ ಮೊಲಗಳು, ಕಲ್ಲು ಗೋಜನಕ್ಕಿ ಸೇರಿದಂತೆ ನಾನಾ ಕೃಷಿ ಸ್ನೇಹಿ ಪಶು ಮತ್ತು ಜಾನುವಾರು ತಳಿಗಳನ್ನು ಮೇಳದಲ್ಲಿ ಪ್ರದರ್ಶನ ಮಾಡಲಾಗಿತ್ತು.

ಕೃಷಿಯ ಆಧುನಿಕತೆಗೆ ಸಂಬಂಧಪಟ್ಟಂತೆ ಹೊಸ ಹೊಸ ಪರಿಕರಗಳು ಲಭ್ಯವಿದ್ದವು. ಈ ಬಾರಿ ವಿಶೇಷವಾಗಿ ಡ್ರೋಣ್ ತಂತ್ರಜ್ಞಾನದ ಔಷಧಿ ಸಿಂಪಡಣೆ ಯಂತ್ರ ರೈತರ ಗಮನ ಸೆಳೆಯಿತು.
ಜೊತೆಗೆ ಅಡಕೆ ಹಾಗೂ ತೆಂಗು ಬೆಳೆ ಕೊಯ್ಲು ಮಾಡುವ 65 ಅಡಿ ಉದ್ದದ ಅಲ್ಯೂಮಿನಿಯಂ ಗಳ ಜನರ ಆಕರ್ಷಣೆಯಾಗಿತ್ತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಪಾಲ ವಿ.ಆರ್.ವಾಲಾ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೃಷಿ ಸಚಿವ ಎನ್.ಎಚ್.ಶಿವಶಂಕರ್‍ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು.

ರೈತರಿಗೆ ತೊಂದರೆಯಾಗದಂತೆ ವಿಶ್ವವಿದ್ಯಾನಿಲಯ ಪ್ರತಿ ಹಂತದಲ್ಲೂ ಸ್ವಯಂ ಸೇವಕರನ್ನು ನೇಮಿಸಿ ಜನರಿಗೆ ಮಾಹಿತಿ ಒದಗಿಸುತ್ತಿತ್ತು. ಆದರೂ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಜನರು ಮತ್ತು ವಾಹನಗಳನ್ನು ನಿಯಂತ್ರಿಸಲಾಗದೆ ಪೆÇಲೀಸರು ಮತ್ತು ಸ್ವಯಂಸೇವಕರು ಪರದಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ