ಬೆಂಗಳೂರು, ನ.18-ಕೃಷಿ ಚಟುವಟಿಕೆಗಳು ಕಡಿಮೆಯಾಗಿ ರೈತರು ನಷ್ಟದಲ್ಲಿದ್ದಾರೆ. ಲಾಭದಾಯಕವಲ್ಲದ ಕೃಷಿಯಿಂದಾಗಿ ರೈತರು ಈ ಕ್ಷೇತ್ರದಿಂದಲೇ ವಿಮುಖರಾಗುತ್ತಿದ್ದಾರೆ. ಇವರಿಗೆ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು.
ನಗರದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದುವರೆಗೂ 36 ಸಾವಿರ ರೈತರು ಆತ್ಮಹತ್ಯೆ ಶರಣಾಗಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ನಿರಾಸಕ್ತಿ ಮೂಡುತ್ತಿದೆ. ಇದರಿಂದ ಹೆಚ್ಚು ನಷ್ಟವನ್ನು ರೈತರು ಅನುಭವಿಸಿದ್ದಾರೆ.ಇಳುವರಿ ಕಡಿಮೆಯಾಗಿ ಲಾಭವನ್ನೂ ಕಾಣುತ್ತಿಲ್ಲ. ಹಾಗಾಗಿ ಉಪಕಸುಬುಗಳಿಗೆ ಪೆÇ್ರೀತ್ಸಾಹ ನೀಡಬೇಕು, ಆ ಮೂಲಕ ಆರ್ಥಿಕಾಭಿವೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಮಾತನಾಡಿ, ಸಮಗ್ರ ಕೃಷಿ ಅಭಿವೃದ್ಧಿಯಿಂದಾಗಿ ರಾಜ್ಯದ 17,322 ರೈತ ಕುಟುಂಬಗಳು ಆರ್ಥಿಕ ಸ್ಥಿರತೆ ಕಂಡುಕೊಂಡಿವೆ. ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ಕನಿಷ್ಠ ಬಂಡವಾಳದಲ್ಲಿ ಲಾಭ ಪಡೆಯುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ವಿವಿಗೆ ಐಸಿಆರ್ ಪ್ರಶಸ್ತಿ ನಿನ್ನೆಯಷ್ಟೆ ದೊರೆತಿದೆ. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರು ಒಂದು ರೂ. ಬಂಡವಾಳ ಹೂಡಿದರೆ 3 ರಿಂದ 4 ರೂ. ಲಾಭ ಗಳಿಸಬಹುದು. ಈ ಹಿನ್ನೆಲೆಯಲ್ಲಿ ಕೃಷಿ ವಿವಿ ಸಮಗ್ರ ಕೃಷಿ ಪದ್ಧತಿಯನ್ನು ಪರಿಚಯಿಸಿದೆ.
ಕೃಷಿ ವಿವಿ ಈಗಾಗಲೇ 200 ಹೊಸ ತಳಿಗಳನ್ನು ಪರಿಚಯಿಸಿತ್ತು. ಈ ಬಾರಿ ನಾಲ್ಕು ಹೊಸ ತಳಿಗಳನ್ನು ಪರಿಚಯಿಸಿದೆ. ರಾಗಿ ಕೆಎಂ 630, ಸೂರ್ಯಕಾಂತಿ, ಸೋಯ ಅವರೆ, ಅಕ್ಕಿ ಅವರೆ ಈ ನೂತನ ತಳಿಗಳಾಗಿದ್ದು, ಕೃಷಿ ಅಭಿವೃದ್ಧಿಗಾಗಿ 2 ವೆಬ್ಸೈಟ್ಗಳೂ ಸೇರಿದಂತೆ 2 ಮೊಬೈಲ್ ಆ್ಯಪ್ಗಳನ್ನು ಬಿಡುಗಡೆ ಮಾಡಲಾಗಿದೆ.
ನವೋದ್ಯಮ ಅಳವಡಿಸಿಕೊಂಡು ಅಗ್ರಿ ಇನ್ನೋವೇಷನ್ ಸೆಂಟರ್ನ್ನು ಆರಂಭಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿರುವ 150ಕ್ಕು ಹೆಚ್ಚು ಜನರನ್ನು ಸನ್ಮಾನಿಸಲಾಗಿದೆ. ಈ ಬಾರಿಯ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳಿಗಾಗಿ ಮಳಿಗೆಗಳನ್ನು ತೆರೆಯಲಾಗಿದೆ. ಕೃಷಿಯಲ್ಲಿ ಡ್ರೋಣ್ ಬಳಕೆ ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಭೆರೇಗೌಡ, ಶಿವಶಂಕರ್ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.