![dr-g-s-srinivas-chikkadpally-hyderabad-general-physician-doctors-e3rf45](http://kannada.vartamitra.com/wp-content/uploads/2018/11/dr-g-s-srinivas-chikkadpally-hyderabad-general-physician-doctors-e3rf45-339x381.jpg)
ಬೆಂಗಳೂರು, ನ.18- ಗಜ ಚಂಡಮಾರುತದ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯಭಾರ ಕುಸಿತ ಉಂಟಾಗಿದ್ದು, ನವೆಂಬರ್ 20ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಚಂಡಮಾರುತವಾಗಿ ಪರಿವರ್ತನೆಯಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ. ನಾಳೆ ವಾಯುಭಾರ ಕುಸಿತ ತಮಿಳುನಾಡಿನ ಕರಾವಳಿ ಪ್ರವೇಶಿಸುವ ಸಾಧ್ಯತೆಗಳಿದ್ದು, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಪೂರ್ವ ಭಾಗದಲ್ಲಿ ನವೆಂಬರ್ 20ರಿಂದ 24ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಗಜ ಚಂಡಮಾರುತ ನಿರೀಕ್ಷೆಯಂತೆ ರಾಜ್ಯದಲ್ಲಿ ನಿರೀಕ್ಷೆಯಂತೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮ ಉಂಟುಮಾಡಿಲ್ಲ. ರಾಜ್ಯದಲ್ಲಿ ಭಾರೀ ಮಳೆಯೂ ಆಗಲಿಲ್ಲ. ಆದರೆ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಿದೆ. ಚಂಡಮಾರುತದ ಪ್ರಭಾವ ಅರಬ್ಬೀಸಮುದ್ರದಲ್ಲಿದ್ದು, ಅಲೆಗಳ ಉಬ್ಬರ ಹೆಚ್ಚಾಗಿದೆ. ಇಂದು ಮತ್ತು ನಾಳೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.