ರೈತರ ಎಲ್ಲಾ ಸಾಲಗಳನ್ನೂ ಸಂಪೂರ್ಣ ಮನ್ನಾ ಮಾಡಬೇಕೆಂಬ ಬೇಡಿಕೆ ಅರ್ಥಹೀನವಾಗಬಹುದು: ಎಚ್. ಡಿ. ದೇವೇಗೌಡ

ಬೆಂಗಳೂರು, ನ.18- ಬೆಳೆ ಸಾಲ ಮಾತ್ರವಲ್ಲದೆ, ರೈತರ ಎಲ್ಲಾ ಸಾಲಗಳನ್ನೂ ಸಂಪೂರ್ಣ ಮನ್ನಾ ಮಾಡಬೇಕೆಂಬ ಬೇಡಿಕೆ ಅರ್ಥಹೀನವಾಗಬಹುದು ಎಂದು ಜಾತ್ಯಾತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡ ಅವರು ಹೇಳಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ 204ನೇ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ರೈತರ ಬೆಳೆ ಸಾಲಮನ್ನಾ ಮಾಡುವ ಮುನ್ನ ಯಾವುದೇ ಸರ್ಕಾರ ತನ್ನ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಳ್ಳುವತ್ತಲೂ ಗಮನಹರಿಸಬೇಕಾಗುತ್ತದೆ. ಕೇವಲ ತೆರಿಗೆದಾರರ ಮೇಲೆ ಹೊರೆ ಹೊರಿಸಲು ಸಾಧ್ಯವಿಲ್ಲ ಹಾಗೂ ಅದು ಸಾಧುವೂ ಅಲ್ಲ ಎಂದು ಅಭಿಪ್ರಾಯಪಟ್ಟರು.
ಸಾಲ ಮನ್ನಾ ಮಾಡಲು ಮೊದಲನೆಯದಾಗಿ ಕೇಂದ್ರ ಸರ್ಕಾರದ ನೆರವು ಪಡೆಯಲು ಪ್ರಯತ್ನಿಸಬಹುದು, ಇಲ್ಲವಾದಲ್ಲಿ ಎ. ಟಿ. ರಾಮಸ್ವಾಮಿ ಅವರ ವರದಿಯನ್ನು ಆಧರಿಸಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ವಶಪಡಿಸಿಕೊಂಡಿರುವ ಐವತ್ತು ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಮಾರಾಟ ಮಾಡಿ ಸಂಪನ್ಮೂಲ ಸಂಗ್ರಹಿಸುವತ್ತ ಚಿಂತನೆ ನಡೆಸಬಹುದು ಎಂದರು.

ಸಾಲಮನ್ನಾ ಆತ್ಮಹತ್ಯೆ ತಡೆಗೆ ಪರಿಹಾರವಾಗುವುದಿಲ್ಲ. ಎಲ್ಲರಿಗೂ ಅನ್ನ ಕೊಡುವ ರೈತ ಯಾವುದೇ ಕಾರಣಕ್ಕೂ ಅಧೀರನಾಗಬಾರದು. ಯಾವುದೇ ರೈತ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ರೈತ ಬಾಂಧವರಲ್ಲಿ ಕಳಕಳಿಯ ಮನವಿ ಮಾಡಿದರು.
ಪ್ರಧಾನಿಯಾಗುತ್ತೇನೆ ಎಂದು ತಾವು ಕನಸು ಮನಸಿನಲ್ಲೂ ಅಂದು ಕೊಂಡಿರಲಿಲ್ಲ ಎಂದು ಹೇಳಿದ ದೇವೇಗೌಡ ಅವರು, ಜಾತ್ಯಾತೀತ ಪಕ್ಷಗಳು ಒಂದಾಗಿ ತಮ್ಮನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಸಂದರ್ಭವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಹದಿಮೂರು-ದಿನಗಳ ಸರ್ಕಾರ ಪತನಗೊಂಡಾಗ ಪರ್ಯಾಯ ಸರ್ಕಾರ ರಚನೆಯ ಕಸರತ್ತು ಪ್ರಾರಂಭವಾಗಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕ ಭವನದಲ್ಲಿ ತಂಗಿದ್ದ ತಮ್ಮ ಬಳಿ ಆಗಮಿಸಿದ ತೃತೀಯ ರಂಗದ ನಾಯಕರು ಈ ದೇಶದ ಪ್ರತಿಪಕ್ಷಗಳಲ್ಲಿ ವಾಜಪೇಯಿ ಅವರನ್ನು ಸರಿಗಟ್ಟುವ ನಾಯಕರೇ ಇಲ್ಲ ಎಂದು ಬಣ್ಣಿಸತೊಡಗಿದಾಗ ಒಂದು ನೂರು ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಮತ್ತೊಬ್ಬ ಸಮರ್ಥ ನಾಯಕನಿಲ್ಲ ಎಂಬ ಮಾತನ್ನು ಒಪ್ಪುವುದಿಲ್ಲ ಎಂದು ತಾವು ಹೇಳಿದಾಗ, ಹಾಗಾದರೆ ತಾವೇ ನಾಯಕತ್ವ ವಹಿಸಿ ಎಂಬ ಒತ್ತಡ ಮತ್ತು ಒತ್ತಾಯ ಬಂದುದರಿಂದ ತಾವು ಪ್ರಧಾನಿ ಸ್ಥಾನವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು ಎಂದು ಹೇಳಿದರು.

ತಮಗೆ ಭಾಷೆ ಬರೋಲ್ಲ ಅಂದರೂ ಬಿಡಲಿಲ್ಲ. ಪ್ರಧಾನಿ ಹುದ್ದೆಗೆ ಆಯ್ಕೆಯಾದ ವಿಷಯವನ್ನು ಮೊದಲು ತಮ್ಮ ಪತ್ನಿ ಚೆನ್ನಮ್ಮ ಅವರಿಗೆ ದೂರವಾಣಿ ಮೂಲಕ ತಿಳಿಸಿದಾಗ ಅಯ್ಯೋ ನಿಮ್ಮ ಹಣೆಬರಹ ಎಂದು ಚೆನ್ನಮ್ಮ ಅವರು ಪ್ರತಿಕ್ರಿಯಿಸಿದರು ಎಂದು ಪ್ರಧಾನಿ ಸ್ಥಾನ ತೊರೆದ 23 ವರ್ಷಗಳ ನಂತರ ದೇವೇಗೌಡ ಅವರು ಪ್ರಧಾನಿ ಆಯ್ಕೆ ವಿಷಯದ ಅಂದಿನ ಕಸರತ್ತಿನ ಗುಟ್ಟನ್ನು ರಟ್ಟು ಮಾಡಿದರು.

ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ರಾಜ್ಯ ಕಂಡ ಅತ್ಯಂತ ಪ್ರತಿಭಾವಂತ ಮಾತ್ರವಲ್ಲ, ಪ್ರಾಮಾಣಿಕ ಕೂಡಾ. ರೈಲ್ವೆ ಮಂಡಳಿಯ ಅಧ್ಯಕ್ಷರೊಡನೆ ಇದ್ದ ಭಿನ್ನಾಪ್ರಾಯದಿಂದ ಅಂದಿನ ಕೇಂದ್ರ ರೈಲ್ವೆ ಸಚಿವ ಕೆಂಗಲ್ ಹನುಮಂತಯ್ಯ ಅವರು ಇಂದಿರಾಗಾಂಧಿ ಅವರ ಸಂಪುಟದಿಂದ ಹೊರ ಬರುವ ಪ್ರಸಂಗ ಎದುರಾಯಿತು. ಈ ಮುಜುಗುರನ್ನು ತಪ್ಪಿಸಿಕೊಳ್ಳಲು ಹನುಮಂತಯ್ಯ ಅವರು ರಾಜ್ಯ ರಾಜಕೀಯ ಹದೆಗೆಟ್ಟಿದೆ. ಅದಕ್ಕಾಗಿ ತಾವು ರಾಜ್ಯ ರಾಜಕಾರಣಕ್ಕೆ ಮರುಳುತ್ತಿರುವುದಾಗಿ ಪ್ರಕಟಿಸಿದರು.

ತಾವು ಪ್ರತಿಪಕ್ಷ ನಾಯಕರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಅಧಿಕಾರಿಗಳ ಗ್ಯಾಲರಿಯತ್ತ ತೆರಳಿ ಸದನದಲ್ಲಿ ತಮ್ಮ ವಿರುದ್ಧ ಟೀಕಾ ಪ್ರಹಾರ ಮಾಡಲು ದೇವೇಗೌಡ ಅವರಿಗೆ ಮಾಹಿತಿ ಒದಗಿಸುತ್ತಿರುವವರು ಯಾರು ? ಎಂದು ಪ್ರಶ್ನಿಸಿದ ಘಟನೆಯನ್ನು ದೇವೇಗೌಡ ಅವರು ತಮ್ಮ ನೆನಪಿನಂಗಳದಿಂದ ಹೊರಹಾಕಿದರು.

ಕನ್ನಡ ಮತ್ತು ಸಂಸ್ಕøತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ ಜಯಮಾಲಾ ರಾಮಚಂದ್ರ ಅವರು 85-ವರ್ಷದ ನಾಡಿನ ಹಿರಿಯ ಚೇತನ ದೇವೇಗೌಡ ಅವರಿಗೆ ಫಲ-ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು. ದೇವೇಗೌಡ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದ ವಿಶೇಷತೆಗಳಲ್ಲೊಂದಾಗಿತ್ತು.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕøತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಕಾರ್ಯಕ್ರಮದ ವಿಶೇಷತೆಗಳನ್ನು ಬಣ್ಣಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ