ಸಂಪುಟ ವಿಸ್ತರಣೆಗೂ ಮುನ್ನ ತಿಂಗಳಾಂತ್ಯದೊಳಗೆ ನಿಗಮ ಮಂಡಳಿಗಳಿಗೆ ನೇಮಕಾತಿ

ಬೆಂಗಳೂರು, ನ.17- ಸಚಿವ ಸಂಪುಟ ವಿಸ್ತರಣೆಗೂ ಮುನ್ನ ತಿಂಗಳಾಂತ್ಯದೊಳಗೆ ನಿಗಮ ಮಂಡಳಿಗಳಿಗೆ ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಲು ಮೈತ್ರಿ ಪಕ್ಷಗಳು ಮುಂದಾಗಿವೆ.

ರಾಜ್ಯದಲ್ಲಿರುವ ಎಲ್ಲಾ ನಿಗಮ ಮಂಡಳಿಗಳ ಪೈಕಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಸುಮಾರು 90ಕ್ಕೂ ಹೆಚ್ಚು ನಿಗಮ ಮಂಡಳಿಗಳನ್ನು ಗುರುತಿಸಲಾಗಿದ್ದು, ಅವುಗಳಿಗಷ್ಟೇ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೆಶಕರನ್ನು ನೇಮಿಸಲು ನಿರ್ಧರಿಸಲಾಗಿದೆ.

ಮೊದಲ ಹಂತದಲ್ಲಿ ಅಧ್ಯಕ್ಷರನ್ನು ನೇಮಿಸಿ ನಂತರ ನಿರ್ದೇಶಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಿಸಲು ಚಿಂತನೆ ನಡೆಸಲಾಗಿದೆ.

ಸಮ್ಮಿಶ್ರ ಸರ್ಕಾರದ ರಾಜಕೀಯ ಹೊಂದಾಣಿಕೆ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. ಬಹಳಷ್ಟು ಮಂದಿ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅವರನ್ನು ಸಮಾಧಾನಪಡಿಸಲು ಮತ್ತು ಸಾಮಾಜಿಕ ನ್ಯಾಯ ಪರಿಪಾಲನೆ ದೃಷ್ಟಿಯಿಂದ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ.
ಕಾಂಗ್ರೆಸ್ ಶೇ.60, ಜೆಡಿಎಸ್ ಶೇ.40ರ ಅನುಪಾತದಲ್ಲಿ ನಿಗಮ ಮಂಡಳಿ ಹಂಚಿಕೆಯಾಗಲಿದ್ದು, ಜೆಡಿಎಸ್ ತಮ್ಮ ಪಕ್ಷಕ್ಕೆ ಪ್ರಮುಖ ನಿಗಮ ಮಂಡಳಿಗಳನ್ನು ಬಿಟ್ಟುಕೊಡುವುದಾದರೆ ಕಾಂಗ್ರೆಸ್‍ಗೆ ಒಂದಷ್ಟು ಹೆಚ್ಚು ನಿಗಮ ಮಂಡಳಿಗಳನ್ನು ಬಿಟ್ಟುಕೊಡುವುದಾಗಿ ಸಲಹೆ ನೀಡಿದೆ.

ಆದರೆ ಕಾಂಗ್ರೆಸ್‍ನಲ್ಲಿ ಅತೃಪ್ತ ಶಾಸಕರು ಹೆಚ್ಚಿರುವುದರಿಂದ ಜೆಡಿಎಸ್‍ಗೆ ಪ್ರಮುಖ ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನವೇ ನಿಗಮ ಮಂಡಳಿಗಳ ನೇಮಕಾತಿಯನ್ನು ಪೂರ್ಣಗೊಳಿಸದೇ ಇದ್ದರೆ ಕಾರ್ಯಕರ್ತರು ಹಾಗೂ ಮುಖಂಡರನ್ನು ಸಮಾಧಾನಪಡಿಸುವುದು ಕಷ್ಟವಾಗುವ ಸಾಧ್ಯತೆ ಇರುವುದರಿಂದ ಪಕ್ಷದ ಮುಖಂಡರು ಈಗಾಗಲೇ ಕಸರತ್ತು ಆರಂಭಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಇರುವ 8 ಸ್ಥಾನಗಳಿಗೆ 80ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಬಹುತೇಕ ಆಕಾಂಕ್ಷಿಗಳನ್ನು ಅರ್ಹತೆ ಆಧರಿಸಿ ನಿಗಮ ಮಂಡಳಿಗಳಿಗೆ ನೇಮಿಸಿದರೆ, ಸಂಪುಟ ವಿಸ್ತರಣೆಯ ಒತ್ತಡ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರದಿಂದ ಪಕ್ಷದ ಹಿರಿಯರು ತಿಂಗಳಾಂತ್ಯದೊಳಗೆ ಈ ಪಕ್ರಿಯೆ ಪೂರ್ಣಗೊಳಿಸುವ ತಯಾರಿ ಆರಂಭಿಸಿದ್ದಾರೆ.

ಆದರೆ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಿತವ್ಯಯದ ಸೂತ್ರ ಪಾಲನೆ ಮಾಡುತ್ತಿದ್ದಾರೆ. ಅತ್ತ ರಾಜಕೀಯ ಅನಿವಾರ್ಯತೆಗಳಿಂದ ಕಾರ್ಯಕರ್ತರು, ಶಾಸಕರು ಹಾಗೂ ಮುಖಂಡರಿಗೆ ಅಧಿಕಾರ ಹಂಚಿಕೆ ಮಾಡಲೇಬೇಕಿದೆ. ಈ ಇಬ್ಬಂದಿತನದ ನಡುವೆಯೂ ನೇಮಕಾತಿ ಪ್ರಕ್ರಿಯೆಗಳು ಶುರುವಾಗಿದೆ. ಕಾಂಗ್ರೆಸ್‍ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನಖರ್ಗೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮದೇ ಆದ ಪಟ್ಟಿಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ವಾರದೊಳಗಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜತೆ ಚರ್ಚಿಸಿದ ನಂತರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಇತ್ತ ಜೆಡಿಎಸ್‍ನಲ್ಲಿ ಪಟ್ಟಿ ಬಹುತೇಕ ಸಿದ್ದಗೊಂಡಿದ್ದು, ಎರಡೂ ಪಕ್ಷಗಳ ಶಾಸಕರು, ಮುಖಂಡರಿಗೆ ಹಂತ ಹಂತವಾಗಿ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ