ಅಗರ್ತಲಾ: ಅಪ್ರಾಪ್ತ ಬಾಲಕಿಯರಿಬ್ಬರನ್ನು ಅಪಹರಿಸಿ ಬಂಧಿಸಿಟ್ಟು, ಗ್ಯಾಂಗ್ ರೇಪ್ ನಡೆಸಿರುವ ಘೋರ ಘಟನೆ ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ನಡೆದಿದೆ.
34 ವರ್ಷದ ಆಟೋ ಚಾಲಕ ಮೊದಲ ಅಪರಾಧಿಯಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯರಿಬ್ಬರೂ ಸ್ವಂತ ಅಕ್ಕ-ತಂಗಿಯರಾಗಿದ್ದಾರೆ. ನವೆಂಬರ್ 9ರಂದು ಕೈಲಾಶಹರ್ ಸೇತುವೆ ಬಳಿ ನಿಂತು ಮನೆಗೆ ಹೋಗಲು ವಾಹನಕ್ಕಾಗಿ ಈ ಸಹೋದರಿಯರು ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಆಟೋವನ್ನು ಹತ್ತಿದ್ದಾರೆ. ಆದರೆ ಆ ಚಾಲಕ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮತ್ತಿಬ್ಬರು ಪುರುಷರನ್ನು ಆಟೋಕ್ಕೆ ಹತ್ತಿಸಿಕೊಂಡಿದ್ದಲ್ಲದೆ, ತನಗೆ ಪರಿಚಯದವರು ಎಂದು ಹೇಳಿಕೊಂಡಿದ್ದಾನೆ.
ಬಳಿಕ ಹುಡುಗಿಯರನ್ನು ಮನೆಗೆ ಬಿಡದೆ ಅವರ ಬಾಯಿಯನ್ನು ಟವೆಲ್ನಿಂದ ಮುಚ್ಚಿ ಕೋವಾಯ್ ಜಿಲ್ಲೆಯ ತೇಲಿಯಾಮುರಾ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಮನೆಯೊಂದರ ಕೋಣೆಯಲ್ಲಿ ಬಾಲಕಿಯರನ್ನು ಬಂಧಿಸಿಟ್ಟು ಸತತ ಎರಡು ದಿನ ಮೂರು ಜನರೂ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಎರಡು ದಿನಗಳಾದ ಬಳಿಕ ಅವರನ್ನು ತೇಲಿಯಾಮುರಾ ರೈಲ್ವೆ ಸ್ಟೇಶನ್ನಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಬಾಲಕಿಯರು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಕೈಲಾಶಹರ್ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಸಂಪಾ ದಾಸ್ ತಿಳಿಸಿದ್ದಾರೆ.
ಸಹೋದರಿಯರ ತಾಯಿ ದೂರಿನ ಮೇರೆಗೆ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಜಾಲಬೀಸಲಾಗಿದೆ.
2 Sisters Allegedly Kidnapped, Gang-Raped, By 3 Men In Tripura