
ಬೆಂಗಳೂರು, ನ.17-ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಕಾಂಗ್ರೆಸ್ ತಾನು ಮಾಡಿದ ತಪ್ಪನ್ನು ನಮ್ಮ ಪಕ್ಷದ ಮೇಲೆ ಹೊರೆಸಿದೆ ಎಂದು ಮೂದಲಿಸಿರುವ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ 1989ರಿಂದ ಇಲ್ಲಿಯವರೆಗೆ ಯಾರ್ಯಾರ ಆಡಳಿತದಲ್ಲಿ ಎಷ್ಟೆಷ್ಟು ಸಾಲ ಮಾಡಲಾಗಿದೆ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಆಡಳಿತದಲ್ಲಿ ಪಾಲಿಕೆ ದಿವಾಳಿಯಾಯಿತು ಎಂದು ಹೇಳಿದುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ತಾವು ಮಾಡಿದ ತಪ್ಪನ್ನು ಮುಚ್ಚಿಕೊಂಡು ನಮ್ಮ ಮೇಲೆ ಆರೋಪಿಸಿದ್ದಾರೆ ಎಂದು ತಿರುಗೇಟು ನೀಡಿದರು.
1989ರಿಂದ ಇಲ್ಲಿಯತನಕ ಯಾರ್ಯಾರ ಆಡಳಿತದಲ್ಲಿ ಎಷ್ಟೆಷ್ಟು ಸಾಲ ಮಾಡಲಾಗಿದೆ, ಎಷ್ಟು ಕಟ್ಟಡಗಳನ್ನು ಅಡಮಾನ ಇಡಲಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಆಗ ಅಸಲಿಯತ್ತು ಗೊತ್ತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ನವರು ಮಾಡಿದ ಸಾಲವನ್ನು ತೀರಿಸಲು ಹುಡ್ಕೋದಿಂದ ಬಿಜೆಪಿ ಸಾಲ ಮಾಡಬೇಕಾಯಿತು. ಆಗ ಸಾಕ್ಷಿಗಾಗಿ ಪಾಲಿಕೆ ಆಸ್ತಿಯನ್ನು ಅಡಮಾನ ಇಡಬೇಕಾಯಿತು. ಅದಕ್ಕಾಗಿ 12-13ನೆ ಅವಧಿಯಲ್ಲಿ ಬಿಜೆಪಿ ಸಾಲ ಮಾಡಿತ್ತು. ಶ್ವೇತಪತ್ರ ಹೊರಡಿಸುವಂತೆ ನಾವು ಕೇಳುತ್ತಲೇ ಬಂದಿದ್ದೇವೆ. ಎಲ್ಲಿ ನಿಜ ಬಣ್ಣ ಬಯಲಾಗುತ್ತದೋ ಎಂಬ ಕಾರಣಕ್ಕೆ ಶ್ವೇತಪತ್ರ ಹೊರಡಿಸುತ್ತಿಲ್ಲ ಎಂದು ಛೇಡಿಸಿದರು.
ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಪರಮೇಶ್ವರ್ ಸುಳ್ಳು ಹೇಳಿದ್ದಾರೆ. ಅವರಿಗೆ ಸುಳ್ಳಿನ ಸರದಾರ ಎಂಬ ಬಿರುದು ಕೊಡಬೇಕು ಎಂದು ವ್ಯಂಗ್ಯವಾಡಿದರು.
1800 ಕೋಟಿ ರೂ. ವಾರ್ಡ್ ವರ್ಕ್ ಬಿಲ್ ಪೆಂಡಿಂಗ್ ಇದೆ. ಕಳೆದ 5 ವರ್ಷದಿಂದ ಕಸದ ಗುತ್ತಿಗೆಗೆ ಟೆಂಡರ್ ಕರೆಯದೆ ಖಾಸಗಿ ಗುತ್ತಿಗೆದಾರರಿಗೆ ಡಿಸಿ ಬಿಲ್ ಮೂಲಕ ಗುತ್ತಿಗೆ ನೀಡಲಾಗಿದೆ. ಕಸ ಸಂಸ್ಕರಣಾ ಘಟಕಕ್ಕೆ 500 ಕೋಟಿ ರೂ. ವೆಚ್ಚ ಮಾಡಿದ್ದಾರೆ ಆದರೂ ಸರಿಯಾಗಿ ಕಸ ನಿರ್ವಹಣೆಯಾಗುತ್ತಿಲ ಸರ್ಕಾರ ಘೋಷಿಸಿದ್ದಂತೆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಇದೆಲ್ಲ ಪಾರದರ್ಶಕ ಆಡಳಿತವೇ ಎಂದು ಪದ್ಮನಾಭರೆಡ್ಡಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಬಿಎಂಪಿಗೆ 7 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದರೆಂದು ಹೇಳಿದ್ದೀರ. ಇಷ್ಟು ಹಣವನ್ನು ಬಿಡುಗಡೆ ಮಾಡುವುದಕ್ಕೆ ನಿಮಗೆ ತಾಕತ್ತಿದೆಯಾ? ಸುಮ್ಮನೆ ಮಾಧ್ಯಮಗಳ ಮುಂದೆ ಸುಳ್ಳುಗಳನ್ನು ಹೇಳಿ ಬಿಜೆಪಿಯನ್ನು ಟೀಕೆ ಮಾಡಬೇಡಿ. ಶ್ವೇತಪತ್ರ ಹೊರಡಿಸುವುದಕ್ಕೆ ನಿಮಗೆ ತಾಕತ್ತು ಇದೆಯೇ? ತಾಕತ್ತಿದ್ದರೆ ಕೂಡಲೇ ಶ್ವೇತಪತ್ರ ಹೊರಡಿಸಿ ಎಂದು ಪರಮೇಶ್ವರ್ ಅವರಿಗೆ ಪದ್ಮನಾಭರೆಡ್ಡಿ ಸವಾಲು ಹಾಕಿದರು.