ನಗರದಲ್ಲಿ ಕಸ ತೆಗೆಯಲು ಹೊಸ ಟೆಂಡರ್

ಬೆಂಗಳೂರು, ನ.16- ನಗರದಲ್ಲಿ ಕಸ ತೆಗೆಯಲು ಹೊಸ ಟೆಂಡರ್ ಕರೆಯಲಾಗಿದೆ. ತ್ಯಾಜ್ಯ ವಿಲೇವಾರಿ ಸರಿಯಾಗಿ ನಿರ್ವಹಿಸಲು 198 ವಾರ್ಡ್‍ಗಳಿಗೂ ಮಾರ್ಷಲ್‍ಗಳನ್ನು ನಿಯೋಜಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 233 ಮಾರ್ಷಲ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇವರು ರಾತ್ರಿ 8ರಿಂದ ಬೆಳಗಿನ ಜಾವ 1 ಗಂಟೆಯವರೆಗೆ ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಡಬರೀಸ್ ಸುರಿಯುವವರಿಗೆ ಮೊದಲು ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗುವುದು. ಮತ್ತೆ ಸುರಿದರೆ 5ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಎಲ್ಲೆಂದರಲ್ಲಿ ಕಸ ಹಾಕುವವರಿಗೆ 100ರಿಂದ 500ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಡಬರೀಸನ್ನು ಸೂಕ್ತ ವಿಲೇವಾರಿ ಮಾಡಲು ಸಾಧ್ಯವಿಲ್ಲದ ಕಾರಣ ಖಾಸಗಿ ಸಂಸ್ಥೆಯೊಂದಕ್ಕೆ ಟೆಂಡರ್ ನೀಡಿದ್ದು. ಅವರು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಿದ್ದಾರೆ ಎಂದ ಅವರು, 2600 ಜನರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ತೀರ್ಮಾನಿಸಲಾಗಿದೆ. ಎಫ್‍ಐಆರ್ ಹಾಕಲು ಆಯಾ ಪೆÇಲೀಸ್ ಠಾಣೆಗಳಿಗೆ ಸೂಚಿಸಲಾಗಿದೆ ಎಂದರು.

ಡಿಫೆನ್ಸ್- ರೈಲ್ವೆ ಜಮೀನು ತೆರಿಗೆ ವ್ಯಾಪ್ತಿಗೆ:
ಇದುವರೆಗೂ ನಗರದಲ್ಲಿರುವ ರೈಲ್ವೆ, ಡಿಫೆನ್ಸ್ ಜಮೀನುಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಇವುಗಳನ್ನು ಕೂಡ ತೆರಿಗೆ ವ್ಯಾಪ್ತಿಗೆ ತರುವಂತೆ ಆದೇಶ ನೀಡಿರುವುದರಿಂದ ಸೇವಾ ತೆರಿಗೆ ಕಟ್ಟುವಂತೆ ಡಿಫೆನ್ಸ್ ಹಾಗೂ ರೈಲ್ವೆ ಇಲಾಖೆಗೆ ನೋಟಿಸ್ ಜಾರಿ ಮಾಡುತ್ತೇವೆ. ಒಂದು ವೇಳೆ ತೆರಿಗೆ ಕಟ್ಟದಿದ್ದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಇದೇ ವೇಳೆ ಮಂಜುನಾಥ್ ಪ್ರಸಾದ್ ತಿಳಿಸಿದರು.

ಸಿಎಜಿ ವರದಿಯಲ್ಲಿ ಸುಧಾರಣಾ ಶುಲ್ಕ ಕಟ್ಟದೆ ಖಾತೆ ಮಾಡಿಕೊಡಲಾಗಿದೆ. ಇದರಿಂದ 300ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ. ಕೆಆರ್‍ಐಡಿಎಲ್ ಸಂಸ್ಥೆಗೆ ಗುತ್ತಿಗೆ ನೀಡುವ ವಿಚಾರದಲ್ಲೂ ಗೋಲ್‍ಮಾಲ್ ನಡೆದಿದೆ ಎಂದು ವರದಿಯಲ್ಲಿ ಬಂದಿದೆ. ಇದನ್ನೆಲ್ಲಾ ಪರಿಶೀಲಿಸಿ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸುಧಾರಣಾ ಶುಲ್ಕ ಕಟ್ಟಿಸಿಕೊಳ್ಳಲು ನಮಗೆ ಅನುಮತಿ ಇರಲಿಲ್ಲ. ಈಗ ನ್ಯಾಯಾಲಯವೇ ಸುಧಾರಣಾ ಶುಲ್ಕ ಕಟ್ಟಿಸಿಕೊಳ್ಳುವಂತೆ ಆದೇಶಿಸಿದೆ. 300ಕೋಟಿ ಲೋಪದೋಷ ಕಂಡು ಬಂದಿರುವುದರಲ್ಲಿ ಈಗಾಗಲೇ 259 ಕೋಟಿಯನ್ನು ನಾವು ವಸೂಲಿ ಮಾಡಿದ್ದೇವೆ. ಉಳಿದದ್ದನ್ನು ಶೀಘ್ರವೇ ವಸೂಲಿ ಮಾಡುತ್ತೇವೆ. ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ನಕ್ಷೆ ಉಲ್ಲಂಘಿಸಿ ಕಟ್ಟಡ ಕಟ್ಟಿದರೆ ಕ್ರಮ:
ನಕ್ಷೆ ಉಲ್ಲಂಘಿಸಿ ಕಟ್ಟಡ ಕಟ್ಟುವವರ ವಿರುದ್ಧ ಕ್ರಮ ಕೈಗೊಳ್ಳಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ. ಅದರಂತೆ ಹೀಗೆ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ