ಇಂದಿರಾ ಕ್ಯಾಂಟೀನ್ನಲ್ಲಿ ಹೊಸ ವರ್ಷದಿಂದ ಕಾಫಿ,ಟೀ ಕೂಡ ಲಭ್ಯ

ಬೆಂಗಳೂರು, ನ.16- ಹೊಸ ವರ್ಷದಿಂದ ಇಂದಿರಾಕ್ಯಾಂಟಿನ್‍ನಲ್ಲಿ ತಿಂಡಿ ಜತೆಗೆ ಕಾಫಿ, ಟೀ ಕೂಡ ಸಿಗಲಿದೆ.

ರಾಜಾಜಿನಗರ ಆರ್‍ಟಿಒ ಕಾಂಪ್ಲೆಕ್ಸ್ ಹಾಗೂ ಕಸಾಯಿಖಾನೆ ಋಣಮುತ್ತಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಇದುವರೆಗೆ ಇಂದಿರಾಕ್ಯಾಂಟಿನ್‍ನಲ್ಲಿ ಐದು ರೂ.ಗೆ ತಿಂಡಿ ದೊರೆಯುತ್ತಿತ್ತು. ಕಾಫಿ, ಟೀ ಸಿಗುತ್ತಿರಲಿಲ್ಲ. ಇಲ್ಲಿ ತಿಂಡಿ ತಿಂದವರು ಬೇರೆಡೆಗೆ ಹೋಗಿ 10ರೂ. ಕೊಟ್ಟು ಕಾಫಿ ಅಥವಾ ಟೀ ಕುಡಿಯಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಒಳಿತು ಮಾಡಲು ಕ್ಯಾಂಟಿನ್‍ನಲ್ಲೇ ಹೊಸ ವರ್ಷದಿಂದ ಕಾಫಿ, ಟೀ ಸಿಗುವ ಹೊಸ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ಕಾಫಿ ಅಥವಾ ಟೀಗೆ 5ರೂ. ಪಾವತಿಸಬೇಕು. ತಿಂಡಿ ಕಾಫಿ ತೆಗೆದುಕೊಂಡಾಗ ಅದರ ಜತೆ ವಡೆ, ಬಜ್ಜಿ , ಬೋಂಡಾ ಮೂರರಲ್ಲಿ ಯಾವುದಾದರು ಒಂದನ್ನು ನೀಡಲಾಗುತ್ತದೆ ಎಂದರು.

ಊಟ, ತಿಂಡಿಗೆ ಸರ್ಕಾರ ಸಬ್ಸಿಡಿ ಕೊಡುತ್ತದೆ. ಆದರೆ, ಕಾಫಿ, ಟೀ, ಬಜ್ಜಿ, ಬೋಂಡಾಗೆ ಸಬ್ಸಿಡಿ ಸಿಗುವುದಿಲ್ಲ. ಬಿಬಿಎಂಪಿಯೇ ಇದನ್ನು ಭರಿಸಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ