ಬೆಂಗಳೂರು,ನ.16-ಮಾಜಿ ಸಚಿವ ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ದ್ವೇಷದ ರಾಜಕಾರಣಕ್ಕೆ ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಣ್ಯಕೋಟಿಯ ಕಥೆಯಾಗಲಿ, ಇನ್ನಿತರ ಆರೋಪವಾಗಲಿ ಅದರ ಬಗ್ಗೆ ನಮಗೆ ತಿಳಿದಿಲ್ಲ. ಆ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದರು.
ಬೆಳಗಾವಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಸೋಮವಾರ ಚರ್ಚೆಗೆ ಆಹ್ವಾನಿಸಲಾಗಿದೆ. ಚರ್ಚೆಯಲ್ಲಿ ಅವರ ಸಮಸ್ಯೆಯನ್ನು ಬಗೆಹರಿಸಲಾಗುವುದು. ಬೀದಿಯಲ್ಲಿ ನಿಂತು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದಿಲ್ಲ. ಅಧಿವೇಶನ ನಡೆಸಲು ಬಿಡುವುದಿಲ್ಲ ಎನ್ನುವುದು ರೈತ ವಿರೋಧಿ ಧೋರಣೆ ಎಂದ ಅವರು, ಸರ್ಕಾರಕ್ಕೆ ಗಡುವು ನೀಡುವ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.
ರೈತರ ಸಮಸ್ಯೆ ಬಗೆಹರಿಸಲು ನಾವು ಸಿದ್ಧ. ಸರ್ಕಾರ ರೈತರು ಹಾಗೂ 6.50 ಕೋಟಿ ಜನರ ಪರವಾಗಿದೆ. ಅವರ ಸಮಸ್ಯೆ ನಿವಾರಣೆ ಸಂದರ್ಭದಲ್ಲಿ ರಾಜಕೀಯ ಬೆರೆಸುವುದು ಸಲ್ಲದು ಎಂದರು.
ಬೆಳಗಾವಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಹಣ ಪಾವತಿ ಕುರಿತಂತೆ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತನಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗ ಬೇರೊಂದು ಸಮಸ್ಯೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಡಲೇ ಇದನ್ನು ಕೈಬಿಟ್ಟು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದರು.
ಈ ಸಂಬಂಧ ರೈತ ಮುಖಂಡರೊಂದಿಗೆ ಸೋಮವಾರ ಮಾತುಕತೆ ನಡೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.