ಕಾನೂನು ಬಾಹಿರ ಚಟುವಟಿಕೆಗಳಗೆ ರಕ್ಷಣೆ ನೀಡುವುದಿಲ್ಲ ಸಿ.ಎಂ. ಕುಮಾರಸ್ವಾಮಿ

ಬೆಂಗಳೂರು,ನ.16- ಕಾನೂನು ಬಾಹಿರ ಚಟುವಟಿಕೆಗಳಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಕ್ಷಣೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಜೆಸ್ಟ್‍ಮೆಂಟ್ ರಾಜಕೀಯ ಮಾಡುವ ಅವಶ್ಯಕತೆ ನಮಗಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ನೈಸ್ ಸಂಸ್ಥೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಅಡ್ಜೆಸ್ಟ್‍ಮೆಂಟ್ ರಾಜಕೀಯ ಮಾಡಿದವರೇ ಬಿಜೆಪಿಯವರು ಎಂದು ವ್ಯಂಗ್ಯವಾಡಿದರು.

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ನೈಸ್ ಸಂಸ್ಥೆಗೆ ಸಂಬಂಧಪಟ್ಟ ವಿಚಾರವನ್ನು ಸಂಪುಟ ಸಭೆಗೆ ತರಲಾಗಿತ್ತು. ಆದರೆ ಸಂಪುಟ ಸಭೆಗೆ ಬಿಜೆಪಿಯವರು ಹಾಜರಾಗದೆ ಗೈರಾಗಿದ್ದರು. ಆಗ ಇಲ್ಲದ ಬದ್ಧತೆ ಈಗ ತೋರಿಸುತ್ತಿದ್ದಾರೆ. ಇದೇ ಬದ್ಧತೆ ಅಂದು ಯಾಕೆ ಇರಲಿಲ್ಲ ಎಂದು ಪ್ರಶ್ನಿಸಿದರು.

ನೈಸ್ ಸಂಸ್ಥೆಗೆ ಸಂಬಂಧಿಸಿದಂತೆ ಸದನ ಸಮಿತಿಯ ವರದಿಯನ್ನು ಇನ್ನು ಒಪ್ಪಿಲ್ಲ. ಒಪ್ಪಿದ ನಂತರ ಅಧಿಕೃತವಾಗಲಿದೆ. ಕ್ರಮ ಕೈಗೊಳ್ಳಲು ಸಮಯಾವಕಾಶ ಬೇಕಾಗಿದೆ ಎಂದರು.

ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ:
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವುದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಇಡಿ ನೋಟಿಸ್ ಕೊಟ್ಟಿದ್ದರೆ ಸಂಬಂಧಪಟ್ಟವರು ಮಾಹಿತಿ ಕೊಡುತ್ತಾರೆ. ನೋಟಿಸ್ ಕೊಟ್ಟ ಮಾತ್ರಕ್ಕೆ ಯಾರೂ ಆತಂಕಕ್ಕೆ ಒಳಗಾಗುವುದಿಲ್ಲ. ಅವರೇ ನಿಭಾಯಿಸಿಕೊಳ್ಳುತ್ತಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ