ಬೆಂಗಳೂರು, ನ.16- ಬೆಂಗಳೂರು ಮಹಾನಗರದಲ್ಲಿ ನಕ್ಷೆ ಉಲ್ಲಂಘಿಸಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡುವವರು ಮತ್ತು ಇದಕ್ಕೆ ಸಹಕರಿಸುವ ಅಧಿಕಾರಿಗಳು ಕಾನೂನು ಮೊರೆ ಹೋಗಿ ಜಾರಿಕೊಳ್ಳುವವರನ್ನು ಮಟ್ಟ ಹಾಕಲು ಸರ್ಕಾರ ಕೆಎಂಸಿ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲು ನಿರ್ಧರಿಸಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ಹುಡ್ಕೋ ಸಂಸ್ಥೆಗೆ ಅಡಮಾನವಿಟ್ಟ ರಾಜಾಜಿನಗರ ವಾಣಿಜ್ಯ ಸಂಕೀರ್ಣ ಹಾಗೂ ಕಸಾಯಿಖಾನೆಯನ್ನು ಋಣಮುಕ್ತಗೊಳಿಸುವ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ನಗರದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಪಡೆದುಕೊಂಡು ಅವುಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಅವಘಡಗಳು ಸಂಭವಿಸುತ್ತಿವೆ ಎಂದರು.
ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಪಡೆದವರು ಅಕ್ರಮವಾಗಿ ಐದಾರು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸುತ್ತಾರೆ. ಇದರಿಂದ ಕಟ್ಟಡಗಳು ವಾಲುವುದು, ಕುಸಿಯುವಂತಹ ಅವಘಡಗಳು ಸಂಭವಿಸುತ್ತವೆ. ಇದಕ್ಕೆ ಕಡಿವಾಣ ಹಾಕಲು ಕೆಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಇಂತಹ ನಕ್ಷೆ ಉಲ್ಲಂಘಿಸುವವರಿಗೆ ದುಪ್ಪಟ್ಟು ಶುಲ್ಕ ವಿಧಿಸುವುದು ಅಲ್ಲದೆ, ನ್ಯಾಯಾಲಯದ ಮೊರೆ ಹೋಗದಂತೆಯೂ ಕೂಡ ತಿದ್ದುಪಡಿಯಲ್ಲಿ ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದರು.
ಅಕ್ರಮ ಕಟ್ಟಡ ನಿರ್ಮಾಣ ಮಾಡಿದವರಿಗೆ ಎಂದು ನೋಟಿಸ್ ನೀಡಿದರೆ ನ್ಯಾಯಾಲಯಕ್ಕೆ ಹೋಗಿ ತಡೆ ತರುತ್ತಾರೆ. ನ್ಯಾಯಾಲಯಕ್ಕೆ ಹೋಗುವ ಮುನ್ನ ಕಟ್ಟಡ ಮೌಲ್ಯದ ಶೇ.50ರಷ್ಟು ಹಿಡುಗಂಟನ್ನು ಇಡಬೇಕಾಗುತ್ತದೆ. ಇದಲ್ಲದೆ, ಅಕ್ರಮ ಕಟ್ಟಡಗಳು ನಗರದಲ್ಲಿ ನಿರ್ಮಾಣವಾಗುತ್ತಿದ್ದರೂ ಕಣ್ಮುಚ್ಚಿ ಕುಳಿತುಕೊಂಡಿರುವ ಅಧಿಕಾರಿಗಳ ವಿರುದ್ಧವೂ ನೇರ ಶಿಸ್ತುಕ್ರಮ ಕೈಗೊಳ್ಳಲು ತಿದ್ದುಪಡಿ ಮಾಡಲಾಗುವುದು ಮತ್ತು ತಿದ್ದುಪಡಿಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಆಸ್ತಿ ತೆರಿಗೆ ಸದ್ಯಕ್ಕಿಲ್ಲ: ಪ್ರತಿ ಮೂರು ವರ್ಷಕ್ಕೊಮ್ಮೆ ಸಹಜವಾಗಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.
ತೆರಿಗೆ ಸಂಗ್ರಹ ಹೆಚ್ಚಳ: ಬಿಬಿಎಂಪಿ ವ್ಯಾಪ್ತಿಯ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೂರು ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈಗಾಗಲೇ 2031 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ನಿಗದಿತ ಅವಧಿಯಲ್ಲಿ ಅಂದರೆ ಮಾರ್ಚ್ನೊಳಗೆ ಬಾಕಿ ತೆರಿಗೆಯನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಅಸ್ತಿತ್ವಕ್ಕೆ ಬಂದ ಮೇಲೆ 2389 ಕೋಟಿ ರೂ.ಗಳಷ್ಟಿದ್ದ ಸಾಲದಲ್ಲಿ ಬಹುತೇಕ ಸಾಲ ತೀರಿಸಲಾಗಿದೆ. 652 ಕೋಟಿ ರೂ. ಸಾಲ ಬಾಕಿ ಇದ್ದು, ಈ ವರ್ಷದೊಳಗೆ ಸಂದಾಯ ಮಾಡಿ ಅಡಮಾನವಿಟ್ಟಿರುವ ಐದು ಕಟ್ಟಡಗಳನ್ನು ಬಿಬಿಎಂಪಿ ಸುಪರ್ದಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.
ರಾಜಾಜಿನಗರ ವಾಣಿಜ್ಯ ಸಂಕೀರ್ಣ, ಕಸಾಯಿಖಾನೆಯನ್ನು 169 ಕೋಟಿಗೆ ಹುಡ್ಕೋ ಸಂಸ್ಥೆಗೆ ಅಡಮಾನವಿಡಲಾಗಿತ್ತು. ಬಡ್ಡಿ ಸೇರಿ 211 ಕೋಟಿಯಷ್ಟು ಸಂದಾಯ ಮಾಡಿ ಋಣಮುಕ್ತ ಮಾಡಲಾಗಿದೆ. ಆರ್ಥಿಕ ವಹಿವಾಟಿನಲ್ಲಿ ಪಾಲಿಕೆ ಮುಂಚೂಣಿಯಲ್ಲಿದೆ. ಐಸಿಆರ್ಎ ರೇಟಿಂಗ್ನಲ್ಲಿ ಎ ಗ್ರೇಡ್ ಪಡೆದಿದೆ ಎಂದು ಅವರು ಹೇಳಿದರು.
ಟಿಪ್ಪು ರಸ್ತೆ ಹೆಸರು ವಿವಾದ: ಜಕ್ಕೂರು ವಾರ್ಡ್ ರಸ್ತೆಗೆ ಟಿಪ್ಪುಸುಲ್ತಾನ್ ರಸ್ತೆ ಎಂದು ಹೆಸರಿಡುವ ಬಗ್ಗೆ ಬಿಬಿಎಂಪಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದಸ್ಯರಲ್ಲಿ ಒಮ್ಮತದ ಅಭಿಪ್ರಾಯ ಬಂದರೆ ಹೆಸರಿಡುತ್ತಾರೆ. ಈ ಬಗ್ಗೆ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಹೇಳಿದರು.
ಪೂಜಾಗಾಂಧಿ ಆಟ ನಡೆಯುವುದಿಲ್ಲ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಟಿ, ಜೆಡಿಎಸ್ ಮುಖಂಡರಾದ ಪೂಜಾಗಾಂಧಿ ಅವರು ಹೇಳಿದ ಕೆಲಸಗಳೇ ನಡೆಯುತ್ತವೆ. ಶಾಸಕರು ಹೇಳಿದ ಕೆಲಸಗಳಿಗೆ ಆಯುಕ್ತರು ಮನ್ನಣೆ ನೀಡುವುದಿಲ್ಲ ಎಂಬ ಆರೋಪ ಕೇಳಿಬಂದಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಹಸಿ ಸುಳ್ಳು. ಕೇವಲ ಊಹಾಪೆÇೀಹ. ಅಂತಹ ಯಾವುದೇ ಬೆಳವಣಿಗೆಗಳು ಇಲ್ಲ ಎಂದು ಹೇಳಿದರು. ಪಕ್ಕದಲ್ಲೇ ಇದ್ದ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಇದಕ್ಕೆ ದನಿಗೂಡಿಸಿದರು.
ಶೀಘ್ರಸಂಪುಟ ವಿಸ್ತರಣೆ: ಸಚಿವ ಸಂಪುಟ ವಿಸ್ತರಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು. ಹೈಕಮಾಂಡ್ ಜತೆ ಚರ್ಚಿಸಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮೇಯರ್ ಗಂಗಾಂಬಿಕೆ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಆಯುಕ್ತರಾದ ಮಂಜುನಾಥ್ ಪ್ರಸಾದ್ ಮುಂತಾದವರು ಇದ್ದರು.