ಚೆನ್ನೈ; ಇಂದು ಮಧ್ಯಾಹ್ನ ಹೊತ್ತಿಗೆ ತಮಿಳುನಾಡಿನ ಆರು ಜಿಲ್ಲೆಗಳ ಕಡಲ ಕಿನಾರೆಗೆ ಗಜ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಲು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದ ರಾಜ್ಯ ಕಂದಾಯ ಸಚಿವ ಗಜ ಚಂಡಮಾರುತ ಪಶ್ಚಿಮ ಮತ್ತು ನೈರುತ್ಯ ದಿಕ್ಕಿನತ್ತ ಪ್ರತಿ ಗಂಟೆಗೆ 10 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದು ಚೆನ್ನೈಯಿಂದ 490 ಕಿಲೋ ಮೀಟರ್ ಮತ್ತು ನಾಗಪಟ್ಟಿಂನಿಂದ ಪೂರ್ವ ಮತ್ತು ಈಶಾನ್ಯ ದಿಕ್ಕಿಗೆ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಎಂದರು.
ಚಂಡಮಾರುತ ಪಶ್ಚಿಮ ಮತ್ತು ನೈರುತ್ಯ ದಿಕ್ಕಿಗೆ ಚಲಿಸಿದ ನಂತರ ಮುಂದಿನ 12 ಗಂಟೆಗಳಲ್ಲಿ ಅದರ ಪರಿಣಾಮ ತೀವ್ರವಾಗಿರುತ್ತದೆ. ನಂತರ ಅದು ಪಂಬನ್ ಮತ್ತು ಕದ್ದಲೂರುಗಳಲ್ಲಿ ನೆಲೆಯಾಗಲಿದೆ. ಚಂಡಮಾರುತದಿಂದಾಗಿ ಕದ್ದಲೂರು, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಇದೇ ವೇಳೆ ಗಜ ಚಂಡಮಾರುತ ಪ್ರತಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ತಮಿಳುನಾಡಿನ ಉತ್ತರ ಕರಾವಳಿ ಭಾಗದಲ್ಲಿ ಅಪ್ಪಳಿಸಲಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರ ತೀರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಯಾವುದೇ ಕ್ಷಣದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ವಿಕೋಪಗಳನ್ನು ತಪ್ಪಿಸಲು ರಣವೀರ್ ಮತ್ತು ಖಂಜಾರ್ ಎಂಬ ಎರಡು ಭಾರತೀಯ ನೌಕಾ ಹಡಗುಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಇನ್ನು ಎರಡು ಮೂರು ದಿನಗಳವರೆಗೆ ಭಾರೀ ಮಳೆಯಾಗುವ ಸೂಚನೆಯಿರುವುದರಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೆಟ್ರೋಲಿಯಂ ಬಂಕ್ ಗಳಲ್ಲಿ ಸಾಕಷ್ಟು ಪೆಟ್ರೋಲ್ ಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಅನಿಯಮಿತಿ ಟೆಲಿಕಾಂ ಸೇವೆ ನೀಡಲು 15 ದಿನಗಳವರೆಗೆ ಸಾಕಷ್ಟು ಇಂಧನವನ್ನು ಉತ್ಪತ್ತಿ ಮಾಡಿ ಸಂಗ್ರಹಿಸಲು ಸೂಚಿಸಲಾಗಿದೆ.