ತೂತುಕುಡಿ ತಾಮ್ರ ಘಟಕ ಪುನರಾರಂಭಕ್ಕೆ ಎನ್ ಜಿಟಿ ಅವಕಾಶ: ಸುಪ್ರೀಂ ಮೆಟ್ಟಿಲೇರಲು ಮುಂದಾದ ತಮಿಳುನಾಡು ಸರ್ಕಾರ

ನವದೆಹಲಿ: ತೂತುಕುಡಿಯ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕ ಪುನಾರಂಭಕ್ಕೆ ಅವಕಾಶ ನೀಡಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ತಮಿಳುನಾಡು ಸಿಎಂ ಇಕೆ ಪಳನಿಸ್ವಾಮಿ ಎನ್ ಜಿಟಿ ತೀರ್ಪು ಪ್ರಶ್ನಿಸಿ ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಎನ್ ಜಿಟಿ, ಕಳೆದ ಏಳು ತಿಂಗಳಿಂದ ಬಂದ್ ಆಗಿದ್ದ ಸ್ಟೆರ್ಲೈಟ್ ಆರಂಭಕ್ಕೆ ಆದೇಶ ನೀಡಿತ್ತು. ಅಲ್ಲದೆ ಮೂರು ವಾರಗಳಲ್ಲಿ ತಾಮ್ರ ಘಟಕ ಆರಂಭಕ್ಕೆ ಬೇಕಾದ ಅನುಮತಿ ನೀಡುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ.

ಸ್ಟೆರ್ಲೈಟ್ ಬಂದ್ ಮಾಡಿರುವುದು ಸಮರ್ಥನಿಯವಲ್ಲ ಎಂದಿರುವ ಎನ್ ಜಿಟಿ, ಮುಂದಿನ ಮೂರು ವರ್ಷಗಳಲ್ಲಿ ತೂತುಕುಡಿಯ ಕಲ್ಯಾಣ ಕಾರ್ಯಗಳಿಗೆ 100 ಕೋಟಿ ರುಪಾಯಿ ಖರ್ಚು ಮಾಡುವಂತೆ ಆದೇಶಿಸಿದೆ.

ತೂತುಕುಡಿಯಲ್ಲಿರುವ ವೇದಾಂತ ಕಾಪರ್‌ ಸ್ಟರ್ಲೈಟ್‌ ಘಟಕದಿಂದ ಪರಿಸರ ನಾಶವಾಗುತ್ತಿದೆ ಎಂಬ ಆಪಾದನೆ ಹಿನ್ನಲೆಯಲ್ಲಿ ತನಿಖೆ ನಡೆಸಿದ ಮೂರು ಸದಸ್ಯರ ಸಮಿತಿ ನೀಡಿದ್ದ ವರದಿಯನ್ನಾಧರಿಸಿ ಹಸಿರು ನ್ಯಾಯಾಧಿಕರಣ ಈ ಮಹತ್ವದ ತೀರ್ಪು ನೀಡಿತ್ತು.

ಮೇಘಾಲಯ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ತರುಣ್‌ ಅಗರ್ವಾಲ್‌ ನೇತೃತ್ವದ ಸಮಿತಿ ಕಾಪರ್‌ ಸ್ಟರ್ಲೈಟ್‌ ಘಟಕಕ್ಕೆ ಬೀಗ ಮುದ್ರೆ ಜಡಿಯುವ ಮುನ್ನ ಯಾವುದೇ ರೀತಿಯ ಕಾನೂನು ಪಾಲನೆಯಾಗಿಲ್ಲ ಎಂದು ವರದಿ ನೀಡಿತ್ತು. ಈ ಬಗ್ಗೆ ಮಾತನಾಡಿರುವ ಸಮಿತಿಯ ಮುಖ್ಯಸ್ಥರಾದ ನ್ಯಾಯಾಧೀಶ ತರುಣ್‌ ಅಗರ್ವಾಲ್‌ ಅವರು, ‘ಘಟಕವನ್ನು ಮುಚ್ಚುವ ಮುನ್ನ ಯಾವುದೇ ನೊಟಿಸ್‌ ಅಥವಾ ಮೆಲ್ಮನವಿಯ ಅವಕಾಶವನ್ನು ವೇದಾಂತ ಸಮೂಹಕ್ಕೆ ನೀಡಲಿಲ್ಲ. ಈ ಮೂಲಕ ನ್ಯಾಯಾಂಗದ ನಿಯಮಾವಳಿಗಳನ್ನೇ ಗಾಳಿಗೆ ತೂರಲಾಗಿದೆ. ಕೆಲ ನಿಯಮಾವಳಿಗಳ ಉಲ್ಲಂಘನೆ ಕಂಡುಬಂದಿದ್ದರೂ, ಘಟಕವನ್ನು ಮುಚ್ಚಲು ನೀಡಿರುವ ಕಾರಣಗಳು ಅಷ್ಟು ಸಮಂಜಸವಾಗಿಲ್ಲ ಎಂದು ಹೇಳಿದ್ದಾರೆ.

ಸ್ಟೆರ್ಲೈಟ್ ವಿರುದ್ಧ ತೂತುಕುಡಿ ನಿವಾಸಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಮಂದಿ ಮೃತಪಟ್ಟ ನಂತರ ತಮಿಳುನಾಡು ಸರ್ಕಾರ ಕಳೆದ ಮೇ 22 ರಂದು ಸ್ಟೆರ್ಲೈಟ್ ತಾಮ್ರ ಕಂಪನಿಗೆ ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ಘಟಕವನ್ನು ಬಂದ್ ಮಾಡಿತ್ತು.

Tamil Nadu,Thoothukudi,Sterlite Copper factory,NGT

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ