ಬೆಂಗಳೂರು, ನ.15- ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯ 20ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಬರುವ ಫೆಬ್ರವರಿ 10ರಂದು ನಡೆಯಲಿದ್ದು, ಸಾಮೂಹಿಕ ವಿವಾಹವಾಗಲಿಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ, ಬಾಸಿಂಗ, ಕಂಕಣ ದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗುರ, ಪೇಟ ಮತ್ತು ವಧು-ವರರ ಬಂಧು-ಬಳಗದವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ವಿವಾಹ ವೇದಿಕೆ ವ್ಯವಸ್ಥಾಪಕ ಹಾಗೂ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಸುದ್ದಿಗೋಷ್ಠಿಯಲ್ಲಿಂದು ವಿವರಣೆ ನೀಡಿದರು.
10.02.2019ನೆ ಭಾನುವಾರ ಬೆಳಗ್ಗೆ 9 ರಿಂದ 10.30ರ ಮೀನ ಲಗ್ನದಲ್ಲಿ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಾಲಯದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ.
ವಿವಾಹವಾಗಲಿಚ್ಛಿಸುವವ ಬೆಂಗಳೂರು ನಗರ ಗ್ರಾಮೀಣ ಪ್ರದೇಶ ಹಾಗೂ ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವವರು 05.02.2019ರ ವೇಳೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಆಸಕ್ತರು 080-26712988/8553389814 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮದುವೆಗಳು ದುಬಾರಿಯಾಗುತ್ತಿರುವುದನ್ನು ಮನಗಂಡು ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯಿಂದ ಕಳೆದ 19 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ವಿವಾಹ ನೆರವೇರಿಸಿಕೊಂಡು ಬರಲಾಗುತ್ತಿದ್ದು, ಇದುವರೆಗೂ 999ಕ್ಕೂ ಹೆಚ್ಚು ಜೋಡಿಗಳು ನಮ್ಮ ಕಾರ್ಯಕ್ರಮದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ ಎಂದು ಬಸವರಾಜ್ ಹೇಳಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮ 1999ರಲ್ಲಿ ಆರಂಭವಾದ ವರ್ಷದಲ್ಲಿ 41 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದವು. ಇದರಿಂದ ಪ್ರೇರೇಪಣೆಗೊಂಡು ವೇದಿಕೆ ವತಿಯಿಂದ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಂದುವರಿಸಿಕೊಂಡು ಬರಲಾಗುತ್ತಿದ್ದು, ಇದೀಗ 20ನೆ ವರ್ಷಕ್ಕೆ ಕಾಲಿರಿಸಿದ್ದೇವೆ ಎಂದರು.
ಈ ವರ್ಷ ಕೂಡ ಪ್ರತಿವರ್ಷದಂತೆ ಅದ್ಧೂರಿಯಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲಾಗುತ್ತಿದ್ದು, ಎಲ್ಲ ಜಾತಿ-ಮತ ಬಾಂಧವರು ಇದರ ಸದುಪಯೋಗಪಡಿಸಿಕೊಳ್ಳಬೇಕು.
ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿಗಳು, ಹಲವಾರು ಮಠಾಧೀಶರು ಪಾಲ್ಗೊಂಡು ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾಗುವ ಜೋಡಿಗಳನ್ನು ಹರಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕರಾದ ಮಾಜಿ ಮೇಯರ್ ಎಸ್.ಕೆ.ನಟರಾಜ್, ಎಚ್.ಕೆ.ಮುತ್ತಪ್ಪ, ಜಿ.ಆರ್.ದಾಮೋದರ್ನಾಯ್ಡು, ಆರ್.ನಾರಾಯಣಸ್ವಾಮಿ, ಜೆ.ದೇವರಾಜಲು, ವಿದ್ಯಾಸಾಗರ್, ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು.