ಹೊಸದಿಲ್ಲಿ: ಅನುಷ್ಕಾ ಶರ್ಮಾ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಮದುವೆಯನ್ನು ಹೆಚ್ಚು ಖಾಸಗಿಯಾಗಿ ನಡೆಸಲು ಇಟಲಿಗೆ ಹಾರಿದ್ದರು. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ಇದೇ ಮಾರ್ಗ ಅನುಸರಿಸಿದ್ದಾರೆ. ಇಟಲಿಯ ಲೇಕ್ ಕೊಮೊದಲ್ಲಿರುವ ವಿಲ್ಲಾ ಡೆಲ್ ಬಾಲ್ಬೆನೆಲ್ಲೋ ರೆಸಾರ್ಟ್ನಲ್ಲಿ ಬುಧವಾರ ಮುಂಜಾನೆ 7 ಗಂಟೆಗೆ ಕೊಂಕಣಿ ಶೈಲಿಯಂತೆ ಈ ಜೋಡಿ ಹಸೆಮಣೆ ಏರಿದೆ. ಆದರೆ, ಅವರಂದುಕೊಂಡಂತೆ ಈ ಮದುವೆ ರಹಸ್ಯವಾಗಿ ಉಳಿದಿಲ್ಲ! ಅಂದರೆ, ಇಬ್ಬರೂ ಮದುವೆ ಮನೆಯಲ್ಲಿ ಹೇಗೆ ಕಾಣಿಸಿಕೊಂಡಿದ್ದರು ಎಂಬುದುರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಕೇವಲ 40 ಮಂದಿ ಮಾತ್ರ ವಿವಾಹಕ್ಕೆ ಹಾಜರಿ ಹಾಕಿದ್ದರು. ಬುಧವಾರ ಬೆಳಗ್ಗೆ 7 ಗಂಟೆಗೆ ಕೊಂಕಣಿ ಸಂಪ್ರದಾಯದಂತೆ ಈ ಜೋಡಿ ಹಸೆಮಣೆ ಏರಿತು. ಮದುವೆಗೆ ಬಂದ ಅತಿಥಿಗಳು ಯಾವುದೇ ಫೋಟೋ ತೆಗೆಯಬಾರದು ಎನ್ನುವ ಕಟ್ಟಾಜ್ಞೆ ಇತ್ತು. ಆದರೆ ಕೆಲವರು ರಣವೀರ್ ಹಾಗೂ ದೀಪಿಕಾ ಅವರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿ ಮದುವೆ ಮನೆಯಲ್ಲಿ ಹೇಗೆ ಕಾಣಿಸಿಕೊಂಡಿದ್ದರು ಎನ್ನುವ ರಹಸ್ಯ ಬಯಲಾಗಿದೆ. ಫೋಟೋ ನೋಡಿ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇಂದು ಸಿಂಧಿ ಸಂಪ್ರದಾಯದಂತೆ ರಣವೀರ್-ದೀಪಿಕಾ ವಿವಾಹ ನೆರವೇರಲಿದೆ. ಶಾರುಖ್ ಖಾನ್, ಫರ್ಹಾನ್ ಅಖ್ತರ್ ಸೇರಿ ಕೆಲವೇ ಕೆಲವು ಮಂದಿ ವಿವಾಹಕ್ಕೆ ಹಾಜರಾಗಿದ್ದಾರೆ. ಇನ್ನು, ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.