ಮಕ್ಕಳ ದಿನಾಚರಣೆಯಂದು ತ್ರಿವಳಿ ಮಕ್ಕಳಿಗೆ ಜನ್ಮ- ಮತ್ತೊಂದೆಡೆ ಮಗುವನ್ನೇ ಬಿಟ್ಟು ಹೋದ ತಾಯಿ

ತುಮಕೂರು/ಯಾದಗಿರಿ: ಮಕ್ಕಳ ದಿನಾಚರಣೆಯಂದು ತುಮಕೂರಿನಲ್ಲಿ ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ, ಯಾದಗಿರಿಯಲ್ಲಿ ತಾಯಿಯೇ ತನ್ನ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಅಪರೂಪದ ಘಟನೆ ನಡೆದಿದೆ. ಮಕ್ಕಳ ದಿನಾಚರಣೆಯಂದೇ ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 24 ವರ್ಷದ ಶೈಲಾ ಅವರು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯದಿಂದ ಇದ್ದಾರೆ. ಡಾ. ಶಿಲ್ಪಾಶ್ರೀ ನೇತೃತ್ವದ ವೈದ್ಯರ ತಂಡದಿಂದ ಡೆಲಿವರಿ ಮಾಡಿಸಿದೆ.

ಇತ್ತ ಯಾದಗಿರಿಯಲ್ಲಿ ಮಕ್ಕಳ ದಿನಾಚರಣೆ ದಿನವೇ ತಾಯಿಯೊಬ್ಬರು ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದಾಳೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ದಾಖಲಾಗಿದ್ದಳು. ಹೆರಿಗೆ ನಂತರ ಬೆಳಿಗ್ಗೆ ತಾಯಿ ಹೆತ್ತ ಮಗುವನ್ನು ಬಿಟ್ಟು ಪರಾರಿಯಾಗಿದ್ದಾಳೆ.

ಸದ್ಯ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಿಂದ ನವಜಾತ ಹೆಣ್ಣು ಶಿಶು ರಕ್ಷಿಸಿದ್ದು, ಹೆತ್ತಮ್ಮಳ ಮಡಿಲು ಸೇರಲು ಮಗು ಹಂಬಲಿಸುತ್ತಿದೆ. ಮಗುವನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ