ಬೆಂಗಳೂರು, ನ.15-ಸಿಗಂಧೂರು ಸೇತುವೆಗೆ ಸಂಬಂಧಿಸಿದಂತೆ ನಿರಪೇಕ್ಷಣ ಪತ್ರ ನೀಡಿಲ್ಲ ಎಂದು ಆರೋಪಿಸಿ ಮಾಜಿ ಸಚಿವ ಹರತಾಳ ಹಾಲಪ್ಪ ನಗರದ ಶಕ್ತಿ ಭವನದ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಶಕ್ತಿ ಭವನದ ಮೆಟ್ಟಿಲ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಹಾಲಪ್ಪ, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಗಂಧೂರು ಸೇತುವೆ ಮಂಜೂರಾಗಿತ್ತು. ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇದುವರೆಗೂ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ.
ಇದರಿಂದ ಜನಕ್ಕೆ ತೊಂದರೆಯಾಗಿದೆ. ಅಧಿಕಾರಿಗಳ ವರ್ತನೆ ಇದೇ ರೀತಿ ಮುಂದುವರೆದರೆ ಶಿವಮೊಗ್ಗ ಸಂಸದರ ಗಮನಕ್ಕೆ ತಂದು ಮುಂದಿನ ಸೋಮವಾರ ಶಕ್ತಿಭವನದ ಮುಂದೆ ಮತ್ತೆ ಪ್ರತಿಭಟನೆ ಮಾಡುವುದಾಗಿ ಹೇಳಿದ ಅವರು, ನಿರಾಶ್ರಿತರನ್ನೂ ಕೂಡ ಅಂದು ಕರೆತರುವುದಾಗಿ ಹೇಳಿದರು.
ತಾವು ಮಾಡುತ್ತಿರುವ ಪ್ರತಿಭಟನೆ ರಾಜ್ಯ ಸರ್ಕಾರದ ವಿರುದ್ಧವಲ್ಲ, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡುವುದಾಗಿ ತಿಳಿಸಿದರು.