ಬೆಂಗಳೂರು,ನ.15-ವಿದ್ಯುತ್ ಚಾಲಿತ ವಾಹನದಿಂದ ನಗರದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ನಗರದಲ್ಲಿ ಇಂದು ಮಹೀಂದ್ರ ಕಂಪನಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್‍ನೆಡೆಗೆ ವಿಶ್ವದ ಚಲನೆ ಕುರಿತ ಕಾರ್ಯಕ್ರಮದಲ್ಲಿ ತ್ರಿಚಕ್ರ ವಾಹನ ಮತ್ತು ಬ್ಯಾಟರಿ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದನ್ನು ಕೇಳಿದ್ದೇವೆ. ಇದನ್ನು ತಡೆಗಟ್ಟಲು ವಿದ್ಯುತ್ ಚಾಲಿತ ವಾಹನ ಗಳನ್ನು ಬಳಸುವುದರಿಂದ ಮಾಲಿನ್ಯವನ್ನು ತಗ್ಗಿಸಬಹುದು ಎಂದು ಹೇಳಿದರು.
ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸಲು ರಾಜ್ಯ ಸರ್ಕಾರವು ಸಹಕಾರ ನೀಡಲಿದ್ದು, ಇದರ ಬ್ಯಾಟರಿ ದರ ಹೆಚ್ಚಾಗಿರುವ ಕಾರಣ ವಾಹನದ ಬೆಲೆಯೂ ದುಬಾರಿಯಾಗಿದೆ. ಆದ್ದರಿಂದ ಬ್ಯಾಟರಿ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.
ಮಹೀಂದ್ರ ಇಂದು ದೇಶದ ಮುಂಚೂಣಿ ಆಟೋಮೊಬೈಲ್ ಇಂಡಸ್ಟ್ರೀಯಾಗಿದ್ದು, ಆವಿಷ್ಕಾರ, ಸಂಶೋಧನೆ, ತಂತ್ರಜ್ಞಾನದಲ್ಲೂ ಮುಂದಿದೆ ಎಂದು ಶ್ಲಾಘಿಸಿದರು.
ದೇಶದಲ್ಲಿ ಉದ್ಯೋಗ ಸೃಷ್ಟಿ ಸವಾಲಾಗಿದ್ದು, ಯುವ ಸಮೂಹವೇ ದೇಶದ ಭವಿಷ್ಯ. ಈ ನಿಟ್ಟಿನಲ್ಲಿ ಯುವ ಜನಾಂಗ ಡಿಜಿಟಲೀಕರಣ, ಆಟೋಮಿಷನ್ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಿದೆ ಎಂದರು.
ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ನಾನು ಮಡಿಕೇರಿಯಲ್ಲಿ ಮಹೀಂದ್ರ ಜೀಪ್‍ನ್ನು ಓಡಿಸಿದ್ದೇನೆ. ಮಹೀಂದ್ರ ವಿದ್ಯುತ್ ಚಾಲಿತ ವಾಹನಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಿದೆ. ಇದು ಭವಿಷ್ಯದ ಯೋಜನೆಯಾಗಿದೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಆಟೋವನ್ನು ಹೊರತರಲಾಗುವುದು ಎಂದರು.
ಮಹೇಂದ್ರ ಕಂಪನಿಯ ಸಿಇಒ ಮಹೇಶ್‍ಬಾಬು, ಸಿಎಂಡಿ ಪವನ್‍ಗೋಯಾಕ್ ಮತ್ತಿತರರು ಇದ್ದರು.