ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಆರ್‌ಎಸ್‌ಎಸ್ ಬೈಠಕ್ ಶುಕ್ರವಾರ ಕೊನೆಗೊಳ್ಳಲಿದ್ದು ಬುಧವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಪಾಲ್ಗೊಂಡಿದ್ದರು.
ಲೋಕಸಭೆ ಚುನಾವಣೆಗೆ ಮುನ್ನ ರಾಮಮಂದಿರ ನಿರ್ಮಾಣದ ಬಗ್ಗೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ತರಬೇಕೆಂದು ಆರ್‌ಎಸ್‌ಎಸ್ ನಾಯಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ತಡರಾತ್ರಿವರೆಗೆ ನಾಯಕರ ಅಭಿಪ್ರಾಯವನ್ನು ಶಾ ಆಲಿಸಿದ್ದಾರೆ. ಸಭೆಯಲ್ಲಿ ರಾಮಮಂದಿರ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಶಬರಿಮಲೆ ವಿವಾದವೂ ಪ್ರಸ್ತಾಪಗೊಂಡಿದ್ದು, ಬಿಜೆಪಿ ವರಿಷ್ಠರ ಗಮನ ಸೆಳೆಯಲಾಗಿದೆ.
ಕ್ಷೇತ್ರದ ಪರಂಪರೆಗೆ ಧಕ್ಕೆಯಾಗದಂತೆ ಭಕ್ತರ ಸಂಘರ್ಷವನ್ನು ತಪ್ಪಿಸಲು ಬಿಜೆಪಿಯಿಂದ ಪ್ರಯತ್ನ ನಡೆಸುವಂತೆ ಸೂಚನೆ ನೀಡಲಾಗಿದೆ. ಸಭೆ ಬಳಿಕ ಹೊರಟ ಅಮಿತ್ ಶಾ ಓಷಿಯನ್ ಪರ್ಲ್ ಹೊಟೇಲ್‍ನಲ್ಲಿ ತಡರಾತ್ರಿವರೆಗೂ ಬಿಜೆಪಿ ನಾಯಕರೊಂದಿಗೆ ಸಣ್ಣ ಮಟ್ಟಿನ ಸಭೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 9.15ಕ್ಕೆ ವಿಶೇಷ ವಿಮಾನದ ಮೂಲಕ ಅಮಿತ್ ಶಾ ದೆಹಲಿಗೆ ಪ್ರಯಾಣಿಸಲಿದ್ದಾರೆ.
ಏನು ಚರ್ಚೆಯಾಗಿದೆ?
ಸತತ ನಾಲ್ಕು ಗಂಟೆಗಳ ಕಾಲಆರ್‌ಎಸ್‌ಎಸ್ ಮುಖಂಡರ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ಸುರೇಶ್ ಭಯ್ಯಾಜಿ ಜೋಶಿ, ಮುಕುಂದ್ ಜೀ, ಸಂತೋಷ್ ಜೀ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಆರ್‌ಎಸ್‌ಎಸ್ ಪ್ರಮುಖರ, ಸಂಘಟನಾ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆದಿದೆ.
ಅಯೋಧ್ಯೆ, ಶಬರಿಮಲೆ ವಿಚಾರ ಬಳಸಿ ಲೋಕಸಭೆ ಚುನಾವಣೆ ಹೇಗೆ ಎದುರಿಸಬೇಕು? ಜ್ವಲಂತ ವಿಚಾರಗಳ ಮೂಲಕ ಎಡಪಕ್ಷಗಳಿಗೆ ಏಟು ನೀಡಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಥಾನಗಳನ್ನು ಪಡೆಯಲು ಏನು ಮಾಡಬೇಕು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.