ಬೆಂಗಳೂರು,ನ.15- ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷರು ಸೇರಿದಂತೆ ಪಕ್ಷದಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ಕಳೆದ ರಾತ್ರಿ ಮಂಗಳೂರಿಗೆ ಆರ್ಎಸ್ಎಸ್ ನಾಯಕರ ಜೊತೆ ಚರ್ಚೆ ನಡೆಸಲು ಆಗಮಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಸಂಘಪರಿವಾರ ಹಾಗೂ ಕರಾವಳಿ ಭಾಗದ ನಾಯಕರ ಜೊತೆ ಪಕ್ಷದ ಬೆಳವಣಿಗೆಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ.
ಹಾಲಿ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರು ಎರಡು ಸ್ಥಾನಗಳನ್ನು ನಿಭಾಯಿಸುವುದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿಬಂದಿವೆ.
ಯಡಿಯೂರಪ್ಪನವರನ್ನು ಬದಲಾಯಿಸಿದರೆ ಅವರಿಗೆ ಪರ್ಯಾಯವಾಗಿ ಪಕ್ಷದ ಸಾರಥ್ಯವನ್ನು ಯಾರ ಹೆಗಲಿಗೆ ವಹಿಸಬೇಕು ಎಂಬುದರ ಕುರಿತಂತೆ ಅಮಿತ್ ಷಾ ಸಂಘ ಪರಿವಾರ ಮತ್ತು ಕರಾವಳಿ ಭಾಗದ ನಾಯಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.
ಏಕಾಏಕಿ ಅಧ್ಯಕ್ಷ ಸ್ಥಾನದಿಂದ ಬಿಎಸ್ವೈ ಅವರನ್ನು ಬದಲಾಯಿಸಿದರೆ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ವೀರಶೈವ ಲಿಂಗಾಯಿತ ಸಮುದಾಯ ಲೋಕಸಭೆ ಚುನಾವಣೆ ವೇಳೆ ಮುನಿಸಿಕೊಳ್ಳಬಹುದು ಎಂಬ ಭೀತಿಯೂ ವರಿಷ್ಠರನ್ನು ಕಾಡುತ್ತಿದೆ.
ಹೀಗಾಗಿ ಯಡಿಯೂರಪ್ಪ ಸೂಚಿಸಿದವರನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿ ಅವರ ಮಾರ್ಗದರ್ಶನದಲ್ಲೇ ಪಕ್ಷವನ್ನು ಮುನ್ನಡೆಸಿ 2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಬಗ್ಗೆ ಕಾರ್ಯ ತಂತ್ರ ರೂಪಿಸಲಾಗಿದೆ.
ಅಧ್ಯಕ್ಷರ ಬದಲಾವಣೆ ಕುರಿತಂತೆ ಒಂದು ಬಾರಿ ಸಂಸದರು ಮತ್ತು ಶಾಸಕರ ಅಭಿಪ್ರಾಯವನ್ನು ಪಡೆದು ನಂತರ ಬಿಎಸ್ವೈ ಜೊತೆಯೂ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಅಮಿತ್ ಷಾ ನಿರ್ಧರಿಸಿದ್ದಾರೆ.
ಸಂಘ ಪರಿವಾರ ಮತ್ತು ಕರಾವಳಿ ಭಾಗದ ನಾಯಕರ ಅಭಿಪ್ರಾಯ ಸಂಗ್ರಹಿಸಿರುವ ಅಮಿತ್ ಷಾ ತಮ್ಮ ಮುಂದಿನ ನಡೆ ಏನು ಎಂಬುದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ಕೇವಲ ಉಪಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪನವರನ್ನು ಬದಲಾಯಿಸಿದರೆ ಲೋಕಸಭೆ ಚುನಾವಣೆ ಎದುರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಈ ಎರಡೂ ಪಕ್ಷಗಳ ವಿರುದ್ದ ಸೆಣೆಸಬೇಕೆಂದರೆ ಪ್ರಬಲ ನಾಯಕತ್ವ ಅಗತ್ಯವಿದೆ ಎಂಬುದು ಅಮಿತ್ ಷಾಗೆ ಮನವರಿಕೆಯಾಗಿದೆ.
ಉಪಚುನಾವಣೆ ಫಲಿತಾಂಶವೇ ಮಹಾಚುನಾವಣೆಗೆ ಮಾನದಂಡವಾಗುವುದಿಲ್ಲ. ಯಾವ ಪಕ್ಷ ಆಡಳಿತದಲ್ಲಿರುತ್ತದೆಯೋ ಆ ಪಕ್ಷದ ಅಭ್ಯರ್ಥಿಗೆ ಮತದಾರರ ಮತ ಹಾಕುವುದು ಸಂಪ್ರದಾಯ.
ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನೇಕ ಉಪಚುನಾವಣೆಯನ್ನು ಗೆದ್ದಿತ್ತು. ಆದರೆ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅದೇ ಕಾಂಗ್ರೆಸ್ ಎರಡಂಕಿಗೆ ಸೀಮಿತವಾಯಿತು.
ಹೀಗೆ ಮತದಾರನ ಅಭಿಪ್ರಾಯ ಚುನಾವಣೆಯಿಂದ ಚುನಾವಣೆಗೆ ವ್ಯತ್ಯಾಸವಾಗುವುದರಿಂದ ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಬಗ್ಗೆ ಆತುರದ ನಿರ್ಧಾರ ಕೈಗೊಳ್ಳದೆ ಅಳೆದುತೂಗಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.