ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕೆಲವು ನಾಯಕರ ಅತಿರೇಕದ ಹೇಳಿಕೆಗಳೇ ಕಾರಣ: ಹೈಕಮಾಂಡ್‍ಗೆ ಬಿಜೆಪಿ ವರದಿ

ಬೆಂಗಳೂರು,ನ.15- ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭೆ, ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕೆಲವು ನಾಯಕರ ಅತಿರೇಕದ ಹೇಳಿಕೆಗಳೇ ಕಾರಣ ಎಂದು ಹೈಕಮಾಂಡ್‍ಗೆ ಬಿಜೆಪಿ ವರದಿ ನೀಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಸಾವಿನ ಕುರಿತಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಆಡಿದ ವಿವಾದಾದತ್ಮಕ ಹೇಳಿಕೆ ಹಾಗೂ ಶ್ರೀರಾಮುಲು ಮುಖ್ಯಮಂತ್ರಿ ಯಾಗುತ್ತಾರೆಂದು ವಿ.ಸೋಮಣ್ಣ ಗೊಂದಲ ಸೃಷ್ಟಿಸಿದ್ದೇ ಸೋಲಿಗೆ ಮುಳುವಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಉಪಚುನಾವಣೆಯಲ್ಲಿ ಕಳಪೆ ಫಲಿತಾಂಶ ಕುರಿತಂತೆ ವಿಸ್ತೃತ ವರದಿ ನೀಡುವಂತೆ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್‍ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚಿಸಿದ್ದರು.

ಇದರಂತೆ ಶಾಸಕರು ಮತ್ತು ಸಂಸದರಿಂದ ಅಭಿಪ್ರಾಯ ಪಡೆದು ಅಮಿತ್ ಷಾಗೆ ವರದಿ ನೀಡಿರುವ ಮುರುಳೀಧರ್ ರಾವ್, ವರದಿಯಲ್ಲಿ ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ನಮಗೆ ಉಪಚುನಾವಣೆಯಲ್ಲಿ ಹಿನ್ನಡೆಯಾಗಲು ಜನಾರ್ಧನ ರೆಡ್ಡಿ ಮತ್ತು ಸೋಮಣ್ಣನವರ ಗೊಂದಲದ ಹೇಳಿಕೆಗಳು ಒಂದೆಡೆಯಾದರೆ, ಆಡಳಿತ ಯಂತ್ರ ದುರುಪಯೋಗವೂ ಸೋಲಿಗೆ ಮತ್ತೊಂದು ಕಾರಣ ಎಂದು ಉಲ್ಲೇಖ ಮಾಡಿದ್ದಾರೆ.

ರಾಮನಗರ ಮತ್ತು ಮಂಡ್ಯದಲ್ಲಿ ನಾವು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಆದರೆ ಮತದಾನಕ್ಕೆ ಕೇವಲ ಎರಡು ದಿನ ಇರುವಾಗ ರಾಮನಗರದ ಅಭ್ಯರ್ಥಿ ಎಲ್ ಚಂದ್ರಶೇಖರ್, ಚುನಾವಣಾ ಕಣದಿಂದ ನಿವೃತ್ತಿಯಾದದ್ದು ಬಹುದೊಡ್ಡ ಹೊಡೆತ ಎಂದು ಹೇಳಿದ್ದಾರೆ.
ಈ ಬೆಳವಣಿಗೆಯಿಂದ ರಾಮನಗರ ಮಾತ್ರವಲ್ಲದೆ ಉಪಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳಲ್ಲೂ ಪಕ್ಷದ ಬಗ್ಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ವಲಸೆ ಬಂದವರಿಗೆ ಮಣೆ ಹಾಕಿದ್ದೇ ನಾವು ಮಾಡಿಕೊಂಡ ಮಹಾತಪ್ಪು.

ಇನ್ನು ಮತದಾನ ನಡೆಯಲು 48 ಗಂಟೆ ಬಾಕಿ ಇರುವಾಗ ಜನಾರ್ಧನ ರೆಡ್ಡಿ ಸಿದ್ದರಾಮಯ್ಯನವರ ಮಗನ ಸಾವಿನ ಕುರಿತಂತೆ ನೀಡಿದ ಹೇಳಿಕೆ ಕುರುಬ ಸಮುದಾಯ ಮಾತ್ರವಲ್ಲದೇ ವಾಲ್ಮೀಕಿ ಸಮುದಾಯವೂ ಕೂಡ ಪಕ್ಷದಿಂದ ದೂರ ಸರಿಯುವಂತೆ ಮಾಡಿತು.
ಪ್ರತಿ ಚುನಾವಣೆಯಲ್ಲೂ ಜಿಲ್ಲೆಯಲ್ಲಿರುವ ವಾಲ್ಮೀಕಿ, ಲಿಂಗಾಯತ ಹಾಗೂ ಹಾಲುಮತ ಸಮುದಾಯದವರು ಬಿಜೆಪಿಗೆ ಬೆನ್ನಲುಬಾಗಿ ನಿಂತಿದ್ದರು. ರೆಡ್ಡಿ ಹೇಳಿದ ಒಂದೇ ಒಂದು ಹೇಳಿಕೆ ಈ ಎಲ್ಲ ಸಮುದಾಯಗಳು ತಿರುಗಿ ಬೀಳುವಂತೆ ಮಾಡಿದೆ ಎಂದು ಮುರುಳೀಧರ್ ರಾವ್ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ ಎಂದು ವಿ.ಸೋಮಣ್ಣ ಹೇಳಿದ್ದು ಕೂಡ ವೀರಶೈವ ಲಿಂಗಾಯತ ಸಮುದಾಯದ ಮುನಿಸಿಗೆ ಕಾರಣವಾಯಿತು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡದ ಮೇಲೆ ಬಿಜೆಪಿಗೆ ನಾವೇಕೆ ಮತ ಹಾಕಬೇಕೆಂದು ಸಮುದಾಯ ಕಾಂಗ್ರೆಸ್ ಕಡೆ ವಾಲುವಂತೆ ಮಾಡಿದೆ.
ಯಡಿಯೂರಪ್ಪನವರ ಎದುರು ಪರ್ಯಾಯ ನಾಯಕತ್ವ ಪ್ರಸ್ತಾಪಿಸಿದ್ದರಿಂದ ಆ ಸಮುದಾಯ ಅಸಮಾಧಾನಗೊಂಡಿತು. ಪರಿಣಾಮ ಕೆಲವರು ಕಾಂಗ್ರೆಸ್‍ಗೆ ಮತ ಹಾಕಿದರೆ, ಇನ್ನು ಕೆಲವರು ಮತದಾನದಿಂದಲೇ ದೂರ ಉಳಿದಿರು.

ಸೋಮಣ್ಣ ಹೇಳಿಕೆಯಿಂದ ಲಿಂಗಾಯಿತರು ದೂರವಾದರೆ, ರೆಡ್ಡಿ ಹೇಳಿಕೆಯಿಂದ ವಾಲ್ಮೀಕಿ ಮತ್ತು ಹಾಲುಮತಸ್ಥದವರು ಬಿಜೆಪಿಯಿಂದ ದೂರ ಸರಿದರು.
ಇನ್ನು ರಾಮುಲು ಮೇಲೆ ನಾವು ಇಟ್ಟುಕೊಂಡು ಅತಿಯಾದ ಆತ್ಮವಿಶ್ವಾಸವೇ ಮುಳುವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರೆಡ್ಡಿ ಹೇಳಿಕೆಯಿಂದ ಇಡೀ ಚುನಾವಣೆ ದಿಕ್ಕು ತಪ್ಪುವಂತಾಯಿತು. ಕುರುಬ ಸಮುದಾಯದ ಮುಖಂಡರು ಎಲ್ಲೆಡೆ ಸಭೆ, ಸಮಾರಂಭಗಳನ್ನು ನಡೆಸಿ ಬಿಜೆಪಿಗೆ ಮತ ಹಾಕದಂತೆ ಕರೆಕೊಟ್ಟರು.

ಮುಂದಿನ ದಿನಗಳಲ್ಲಿ ಜನಾರ್ಧನ ರೆಡ್ಡಿ ಅವರಿಂದ ಅಂತರ ಕಾಯ್ದುಕೊಳ್ಳಬೇಕೆಂದು ಎಲ್ಲ ರಾಜ್ಯ ನಾಯಕರಿಗೆ ಸೂಚನೆ ಕೊಡಬೇಕು. ಅಲ್ಲದೆ ಚುನಾವಣಾ ಸಂದರ್ಭದಲ್ಲೂ ಯಾರಿಗೂ ಯಾವುದೇ ರೀತಿಯ ಗೊಂದಲ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಬೇಕೆಂದು ಮುರುಳೀಧರ್ ರಾವ್ ವರದಿಯಲ್ಲಿ ಮನವಿ ಮಾಡಿದ್ದಾರೆ.

ಜಮಖಂಡಿಯಲ್ಲಿ ತಂದೆಯ ಸಾವಿನ ಅನುಕಂಪದ ಅಲೆ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಬಿಜೆಪಿ ಇಲ್ಲಿ ಪ್ರಬಲವಾಗಿರುವ ಲಿಂಗಾಯಿತ ಸಮುದಾಯದ ಬದಲು ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ಲೆಕ್ಕಾಚಾರ ಬುಡಮೇಲಾಯಿತು.
ಲಿಂಗಾಯಿತರ ಪ್ರಾಬಲ್ಯವಿರುವ ಹೋಬಳಿಗಳಲ್ಲೇ ಕಾಂಗ್ರೆಸ್‍ಗೆ ಮುನ್ನಡೆಯಾಗಿದೆ. ಅಲ್ಲದೆ ಸ್ಥಳೀಯ ನಾಯಕರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಲಿಲ್ಲ.

ಶಿವಮೊಗ್ಗದಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಎದುರಾಳಿ ಅಭ್ಯರ್ಥಿ ವ್ಯಾಪಕ ಪ್ರಮಾಣದಲ್ಲಿ ಹಣ, ಹೆಂಡ ಹಂಚಿ ಮತಗಳನ್ನು ಖರೀದಿ ಮಾಡಲಾಗಿದೆ. ಹೀಗಾಗಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಮುನ್ನಡೆ ಸಾಧ್ಯವಾಗಲಿಲ್ಲ ಎಂದು ವರದಿ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ