ಬೆಂಗಳೂರು, ನ.14- ಭಾರೀ ವಿವಾದಕ್ಕೆ ಕಾರಣವಾಗಿ ದೋಸ್ತಿ ಸರ್ಕಾರದ ನಡುವೆ ಬಿರುಕು ಮೂಡಿಸಿದ್ದ ಟಿಪ್ಪು ಜಯಂತಿಯನ್ನು ಮುಂದಿನ ವರ್ಷದಿಂದ ಆಚರಿಸದಿರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕಳೆದ ಮೂರು ವರ್ಷಗಳಿಂದ ನವೆಂಬರ್ 10ರಂದು ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಜಯಂತಿ ಆಚರಣೆಗೆ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ ರಾಜ್ಯದ ನಾನಾ ಕಡೆ ಕೋಮು ಸಂಘರ್ಷಕ್ಕೆ ಇದು ಕಾರಣವಾಗಿತ್ತು.
ಈ ಬಾರಿ ನಡೆದ ಟಿಪ್ಪು ಜಯಂತಿ ಆಚರಣೆಗೆ ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಾಗುವ ಮೂಲಕ ಕಾರ್ಯಕ್ರಮದಿಂದ ದೂರ ಉಳಿದಿದ್ದರು.ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು.
ಪ್ರತಿ ಪಕ್ಷ ಬಿಜೆಪಿ ನಾಯಕರು ಇದನ್ನೇ ಅಸ್ತ್ರ ಮಾಡಿಕೊಂಡು ಟಿಪ್ಪು ಜಯಂತಿಗೆ ಗೈರು ಹಾಜರಾಗಿರುವ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಗಿ ಕಾಂಗ್ರೆಸ್ಗೆ ಟಾಂಗ್ ನೀಡಿದ್ದರು.
ಪ್ರತಿ ವರ್ಷ ಟಿಪ್ಪು ಜಯಂತಿಯಂದು ರಾಜ್ಯದಲ್ಲಿ ಕೋಮುಗಲಭೆ ಹಾಗೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಕೆಲವೆಡೆ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಿಗೆ ರಜೆ ನೀಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ.ಅದರಲ್ಲೂ ಸಾರ್ವಜನಿಕರಂತೂ ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬ ಭಯದಿಂದಲೇ ಕಾಲ ನೂಕುತ್ತಾರೆ.
ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬರುವ ವರ್ಷದಿಂದ ಟಿಪ್ಪು ಜಯಂತಿಗೆ ಕೋಕ್ ನೀಡುವ ಮೂಲಕ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ.
ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ಉದ್ದೇಶವೇ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಎಂಬುದು ಬಿಜೆಪಿ ಆರೋಪ. ಹೀಗೆ ಹೇಳುವ ಮೂಲಕವೇ ಹಿಂದೂ ಮತಗಳ ಧ್ರುವೀಕರಣಕ್ಕೆ ಕೇಸರಿ ಪಡೆ ಕಾರ್ಯತಂತ್ರ ರೂಪಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ
ಮೇಲ್ವರ್ಗದ ಮತಗಳು ಕೈಬಿಟ್ಟರೂ ಕಡೆ ಪಕ್ಷ ಅಲ್ಪಸಂಖ್ಯಾತರ ಮತಗಳು ಸಾರಾಸಗಟಾಗಿ ಬಂದರೂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಹೀಗೆ ಎರಡೂ ರಾಷ್ಟ್ರೀಯ ಪಕ್ಷಗಳೂ ಟಿಪ್ಪು ಜಯಂತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಮುಂದಿನ ವರ್ಷ ಈ ಆಚರಣೆಯೇ ಬೇಡ ಎಂಬ ಖಚಿತ ತೀರ್ಮಾನಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಟಿಪ್ಪು ಜಯಂತಿ ಆಚರಿಸುವುದರಿಂದ ಜೆಡಿಎಸ್ಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಇತ್ತೀಚೆಗೆ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿರ್ಣಾಯಕರಾಗಿರುವ ಅಲ್ಪಸಂಖ್ಯಾತ ಮತಗಳು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಜೆಡಿಎಸ್ನಿಂದ ಮುಸ್ಲಿಂ ಮತಗಳು ದೂರ ಸರಿದಿರುವುದು ಫಲಿತಾಂಶದಿಂದಲೇ ಸಾಬೀತಾಗಿತ್ತು.
ಬಹುತೇಕ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿರುವುದರಿಂದ ಜಯಂತಿ ಲಾಭ ಆ ಪಕ್ಷಕ್ಕೆ ದೊರೆತರೆ ತಮಗೆ ನಷ್ಟ ಎಂಬುದು ಜೆಡಿಎಸ್ಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಜೊತೆ ಚರ್ಚಿಸಿರುವ ಕುಮಾರಸ್ವಾಮಿ ಟಿಪ್ಪು ಆಚರಣೆ ಬೇಡವೇ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದಕ್ಕೆ ಡಿಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಜಯಂತಿ ಆಚರಣೆ ಮಾಡುವುದರಿಂದ ಬಿಜೆಪಿ ಕೈಗೆ ಅನಗತ್ಯವಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಅಸ್ತ್ರ ನೀಡಿದಂತಾಗುತ್ತದೆ.
ಟಿಪ್ಪು ದಾಳಿ ನಡೆಸಿದ್ದ ಎನ್ನಲಾದ ಮಡಿಕೇರಿ ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಈ ಜಯಂತಿ ಕುರಿತು ಅಪಪ್ರಚಾರ ನಡೆಸಿದ್ದರಿಂದಲೇ ಬಂಪರ್ ಬೆಳೆ ಬೆಳೆಯುವಂತಾಯಿತು. ಇದಕ್ಕೆ ಕಡಿವಾಣ ಹಾಕಿದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂಬ ಲೆಕ್ಕಾಚಾರದಲ್ಲಿದ್ದಾರೆ ಸಿಎಂ.
ಲೋಕಸಭೆ ಚುನಾವಣೆಯ ವೇಳೆ ಹಿಂದೂ ಅಸ್ತ್ರ ಬಳಸಲು ಮುಂದಾಗಿರುವ ಬಿಜೆಪಿ ಮತಗಳ ಧ್ರುವೀಕರಣಕ್ಕೆ ಕಾರ್ಯತಂತ್ರ ರೂಪಿಸುತ್ತಿದೆ ಎಂಬುದು ಈಗಾಗಲೇ ಅವರಿಗೆ ಮನವರಿಕೆಯಾಗಿದೆ.
ಇತ್ತೀಚಿನ ಚುನಾವಣೆಗಳಲ್ಲಿ ಹಿಂದೂ ಅಜೆಂಡಾವೇ ಬಿಜೆಪಿಗೆ ಅನುಕೂಲವಾಗುತ್ತಿರುವುದರಿಂದ ಅದಕ್ಕೆ ಕಡಿವಾಣ ಹಾಕಲು ದೋಸ್ತಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಆದರೆ ಮುಸ್ಲಿಂ ಸಂಘಟನೆಗಳು ಇದಕ್ಕೆ ಒಪ್ಪುತ್ತವೆಯೇ ಎಂಬುದು ಯಕ್ಷ ಪ್ರಶ್ನೆ.