ಗೆಹ್ಲೊಟ್​​ – ಪೈಲಟ್​ ಹೆಗಲಿಗೆ ರಾಜಸ್ಥಾನ ಚುನಾವಣೆ ಜವಾಬ್ದಾರಿ; ಎರಡೂ ಬಣಗಳ ಬಂಡಾಯ ಶಮನಕ್ಕೆ ಯತ್ನ

ಜೈಪುರ್​: ಕಾಂಗ್ರೆಸ್​ನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್​ ಪೈಲಟ್​ ಇಬ್ಬರಿಗೂ ಇರಿಸುಮುರುಸಾಗದಂತೆ ನೋಡಿಕೊಳ್ಳುವ ಪ್ರಯತ್ನದಿಂದ ಕಾಂಗ್ರೆಸ್​ ಹೈಕಮಾಂಡ್​ ರಾಜಸ್ಥಾನ ಚುನಾವಣೆ ಜವಾಬ್ದಾರಿಯನ್ನು ಇಬ್ಬರಿಗೂ ನೀಡಿದೆ. ಈ ಮೂಲಕ ಎರಡೂ ಬಣಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡುವ ಪ್ರಯತ್ನವನ್ನು ಹೈಕಮಾಂಡ್​ ಮಾಡಿದೆ.

ಈ ಬಾರಿ ರಾಜಸ್ಥಾನ ವಿಧಾನಸಭೆ ಚುನಾವಣೆಯ ಜವಾಬ್ದಾರಿಯನ್ನು ಕಾಂಗ್ರೆಸ್​ ಸಚಿನ್​ ಪೈಲಟ್​ಗೆ ನೀಡಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಅಶೋಕ್​ ಗೆಹ್ಲೊಟ್​ ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಆಂತರಿಕ ಕಲಹ ಆರಂಭವಾದರೆ ಪಕ್ಷಕ್ಕೆ ನಷ್ಟ ಎಂಬುದನ್ನು ಅರಿತ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೂ ಮುನ್ನ ನಿರ್ಧರಿಸುತ್ತಿಲ್ಲ.

“ರಾಹುಲ್​ ಗಾಂಧಿಯವರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ರಾಜಸ್ಥಾನದ ಕಾಂಗ್ರೆಸ್​ಗೆ ಸಂಪ್ರದಾಯವಲ್ಲ. ಈ ಹಿಂದೆಯೂ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್​ ನಿರ್ಧರಿಸಿಲ್ಲ,” ಎಂದು ಅಶೋಕ್​ ಗೆಹ್ಲೊಟ್​ ಹೇಳಿದ್ದಾರೆ.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೊಟ್​ ಸದ್ಯ ಜೋಧ್​ಪುರ್​ ಜಿಲ್ಲೆಯ ಸರ್ದಾರ್​ಪುರ ಕ್ಷೇತ್ರದ ಶಾಸಕ. 1998ರಿಂದಲೂ ಗೆಹ್ಲೊಟ್​ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ಧಾರೆ. ಕಾಂಗ್ರೆಸ್​ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಾಗಲೂ ಗೆಹ್ಲೊಟ್​ ಪಕ್ಷದ ಸಂಘಟನೆಗೆ ಮುಂದಾಗಿದ್ದರು. ಜತೆಗೆ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡ ಸಂದರ್ಭಗಳಲ್ಲಿ ಲೋಕಸಭೆಗೆ ನಾಮನಿರ್ದೇಶಿತರಾಗಲು ಯತ್ನಿಸಿರಲಿಲ್ಲ. ರಾಜಕೀಯದಲ್ಲಿ ದಶಕಗಳ ಅನುಭವ ಹೊಂದಿರುವ ಗೆಹ್ಲೊಟ್​ ರಾಜ್ಯ ರಾಜಕೀಯದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರು.

ಪಕ್ಷದ ನಿಷ್ಟ ಎಂಬುದನ್ನು ಹಲವು ಬಾರಿ ಗೆಹ್ಲೊಟ್​ ಸಾಭೀತು ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಗೆಹ್ಲೊಟ್​ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶದ ಬಹುತೇಕ ಹಿರಿಯ ಕಾಂಗ್ರೆಸ್​ ನಾಯಕರು, ರಾಜ್ಯ ರಾಜಕೀಯದಿಂದ ಕೇಂದ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ಆದರೆ ಗೆಹ್ಲೊಟ್​ ಮಾತ್ರ ರಾಜ್ಯಕ್ಕೇ ಸೀಮಿತರಾಗಿದ್ದಾರೆ. ಆದರೆ ಗೆಹ್ಲೊಟ್​ ಐದು ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಲ್ಲದೆ, ಇಂದಿರಾ ಗಾಂಧಿ, ರಾಜೀವ್​ ಗಾಂಧಿ ಮತ್ತು ಪಿ.ವಿ. ನರಸಿಂಹ ರಾವ್​ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು.

ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ಗೆಹ್ಲೊಟ್​ಗೆ ಈ ಬಾರಿ ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಸಚಿನ್​ ಪೈಲಟ್​ ತೀವ್ರ ಪ್ರತಿಸ್ಪರ್ಧಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರ ನಡುವೆ ಪ್ರಬಲ ಪೈಪೋಟಿ ಶೀತಲ ಸಮರಕ್ಕೆ ನಾಂದಿ ಹಾಡಿದೆ.

ಸಚಿನ್​ ಪೈಲಟ್,​ ಮನಮೋಹನ್​ ಸಿಂಗ್​ರ ಕ್ಯಾಬಿನೆಟ್​ನಲ್ಲಿ ಸಚಿವರಾಗಿದ್ದರು. ಆದರೆ 2014ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅಜ್ಮೀರ್​ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಅದಾದ ನಂತರ ಅದೇ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪೈಲಟ್​ ಸ್ಪರ್ಧಿಸಲಿಲ್ಲ. ಆದರೆ ಕಾಂಗ್ರೆಸ್​ ಬಹುದೊಡ್ಡ ಮತಗಳ ಅಂತರದಿಂದ ಕ್ಷೇತ್ರವನ್ನು ಗೆದ್ದುಕೊಂಡಿತ್ತು.

ಈಗ ಚುನಾವಣಾ ಸಾರಥ್ಯವನ್ನು ಇಬ್ಬರ ಹೆಗಲಿಗೆ ಕಟ್ಟುವ ಮೂಲಕ ಎರಡೂ ಬಣಗಳ ನಾಯಕರನ್ನು ಸಂತೋಷದಿಂದಿಡಲು ಹೈಕಮಾಂಡ್​ ಯತ್ನಿಸಿದೆ.

2008ರಲ್ಲಿ ಅಶೋಕ್​ ಗೆಹ್ಲೊಟ್​ ಎರಡನೇ ಬಾರಿ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಆಗ ಗೆಹ್ಲೊಟ್​ಗೆ ಪ್ರತಿಸ್ಪರ್ಧಿಯಾಗಿದ್ದ ಸಿ.ಪಿ. ಜೋಶಿ ಕೇವಲ ಒಂದು ಮತಗಳ ಅಂತರದಿಂದ ಸೋಲುಂಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ