ಜೈಪುರ್: ಕಾಂಗ್ರೆಸ್ನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್ ಪೈಲಟ್ ಇಬ್ಬರಿಗೂ ಇರಿಸುಮುರುಸಾಗದಂತೆ ನೋಡಿಕೊಳ್ಳುವ ಪ್ರಯತ್ನದಿಂದ ಕಾಂಗ್ರೆಸ್ ಹೈಕಮಾಂಡ್ ರಾಜಸ್ಥಾನ ಚುನಾವಣೆ ಜವಾಬ್ದಾರಿಯನ್ನು ಇಬ್ಬರಿಗೂ ನೀಡಿದೆ. ಈ ಮೂಲಕ ಎರಡೂ ಬಣಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆ.
ಈ ಬಾರಿ ರಾಜಸ್ಥಾನ ವಿಧಾನಸಭೆ ಚುನಾವಣೆಯ ಜವಾಬ್ದಾರಿಯನ್ನು ಕಾಂಗ್ರೆಸ್ ಸಚಿನ್ ಪೈಲಟ್ಗೆ ನೀಡಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಅಶೋಕ್ ಗೆಹ್ಲೊಟ್ ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಆಂತರಿಕ ಕಲಹ ಆರಂಭವಾದರೆ ಪಕ್ಷಕ್ಕೆ ನಷ್ಟ ಎಂಬುದನ್ನು ಅರಿತ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೂ ಮುನ್ನ ನಿರ್ಧರಿಸುತ್ತಿಲ್ಲ.
“ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ರಾಜಸ್ಥಾನದ ಕಾಂಗ್ರೆಸ್ಗೆ ಸಂಪ್ರದಾಯವಲ್ಲ. ಈ ಹಿಂದೆಯೂ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ನಿರ್ಧರಿಸಿಲ್ಲ,” ಎಂದು ಅಶೋಕ್ ಗೆಹ್ಲೊಟ್ ಹೇಳಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸದ್ಯ ಜೋಧ್ಪುರ್ ಜಿಲ್ಲೆಯ ಸರ್ದಾರ್ಪುರ ಕ್ಷೇತ್ರದ ಶಾಸಕ. 1998ರಿಂದಲೂ ಗೆಹ್ಲೊಟ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ಧಾರೆ. ಕಾಂಗ್ರೆಸ್ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಾಗಲೂ ಗೆಹ್ಲೊಟ್ ಪಕ್ಷದ ಸಂಘಟನೆಗೆ ಮುಂದಾಗಿದ್ದರು. ಜತೆಗೆ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡ ಸಂದರ್ಭಗಳಲ್ಲಿ ಲೋಕಸಭೆಗೆ ನಾಮನಿರ್ದೇಶಿತರಾಗಲು ಯತ್ನಿಸಿರಲಿಲ್ಲ. ರಾಜಕೀಯದಲ್ಲಿ ದಶಕಗಳ ಅನುಭವ ಹೊಂದಿರುವ ಗೆಹ್ಲೊಟ್ ರಾಜ್ಯ ರಾಜಕೀಯದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರು.
ಪಕ್ಷದ ನಿಷ್ಟ ಎಂಬುದನ್ನು ಹಲವು ಬಾರಿ ಗೆಹ್ಲೊಟ್ ಸಾಭೀತು ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಗೆಹ್ಲೊಟ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಮಧ್ಯಪ್ರದೇಶದ ಬಹುತೇಕ ಹಿರಿಯ ಕಾಂಗ್ರೆಸ್ ನಾಯಕರು, ರಾಜ್ಯ ರಾಜಕೀಯದಿಂದ ಕೇಂದ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ಆದರೆ ಗೆಹ್ಲೊಟ್ ಮಾತ್ರ ರಾಜ್ಯಕ್ಕೇ ಸೀಮಿತರಾಗಿದ್ದಾರೆ. ಆದರೆ ಗೆಹ್ಲೊಟ್ ಐದು ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಲ್ಲದೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿ.ವಿ. ನರಸಿಂಹ ರಾವ್ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು.
ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ಗೆಹ್ಲೊಟ್ಗೆ ಈ ಬಾರಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ತೀವ್ರ ಪ್ರತಿಸ್ಪರ್ಧಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರ ನಡುವೆ ಪ್ರಬಲ ಪೈಪೋಟಿ ಶೀತಲ ಸಮರಕ್ಕೆ ನಾಂದಿ ಹಾಡಿದೆ.
ಸಚಿನ್ ಪೈಲಟ್, ಮನಮೋಹನ್ ಸಿಂಗ್ರ ಕ್ಯಾಬಿನೆಟ್ನಲ್ಲಿ ಸಚಿವರಾಗಿದ್ದರು. ಆದರೆ 2014ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅಜ್ಮೀರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಅದಾದ ನಂತರ ಅದೇ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪೈಲಟ್ ಸ್ಪರ್ಧಿಸಲಿಲ್ಲ. ಆದರೆ ಕಾಂಗ್ರೆಸ್ ಬಹುದೊಡ್ಡ ಮತಗಳ ಅಂತರದಿಂದ ಕ್ಷೇತ್ರವನ್ನು ಗೆದ್ದುಕೊಂಡಿತ್ತು.
ಈಗ ಚುನಾವಣಾ ಸಾರಥ್ಯವನ್ನು ಇಬ್ಬರ ಹೆಗಲಿಗೆ ಕಟ್ಟುವ ಮೂಲಕ ಎರಡೂ ಬಣಗಳ ನಾಯಕರನ್ನು ಸಂತೋಷದಿಂದಿಡಲು ಹೈಕಮಾಂಡ್ ಯತ್ನಿಸಿದೆ.
2008ರಲ್ಲಿ ಅಶೋಕ್ ಗೆಹ್ಲೊಟ್ ಎರಡನೇ ಬಾರಿ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಆಗ ಗೆಹ್ಲೊಟ್ಗೆ ಪ್ರತಿಸ್ಪರ್ಧಿಯಾಗಿದ್ದ ಸಿ.ಪಿ. ಜೋಶಿ ಕೇವಲ ಒಂದು ಮತಗಳ ಅಂತರದಿಂದ ಸೋಲುಂಡಿದ್ದರು.