ಬೆಂಗಳೂರು, ನ.14- ಕೆಎಂಎಫ್ ನಂದಿನಿ ಹಾಲಿನ ಮಾರಾಟ ದರವನ್ನು ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಂದ ಖರೀದಿಸುವ ಹಾಗೂ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಯವುದೇ ಬದಲಾವಣೆ ಇಲ್ಲ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ 5ರೂ.ಪೆÇ್ರೀ ಧನವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
ಜಿಎಸ್ಟಿ ಜಾರಿಗೆ ಬಂದ ಮೇಲೆ ಹಾಲಿನ ಮಾರುಕಟ್ಟೆ ಮುಕ್ತವಾಗಿದ್ದು, ಯಾರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಹಾಲಿನಲ್ಲಿ ಕಲಬೆರಕೆ, ಆರೋಗ್ಯಕ್ಕೆ ಹಾನಿಯಾದರೆ ಮಾತ್ರ ಅಂತಹ ಹಾಲನ್ನು ತಡೆಯಬಹುದಾಗಿದೆ. ಸದ್ಯಕ್ಕೆ ಹಾಲಿನ ಮಾರುಕಟ್ಟೆ ವಿಸ್ತರಣೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಗೆ ಗಮನ ಹರಿಸಲಾಗುತ್ತಿದೆ ಎಂದರು.
ಯಾವುದೇ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದಾಗ ಆ ಸಂಸ್ಥೆಗೆ ಹಾನಿಯಾದರೆ ನೋವುಂಟಾಗುವುದು ಸಹಜ. ಹಾಗೆಯೇ ಸಚಿವ ರೇವಣ್ಣ ಅವರು ಕೆಎಂಎಫ್ ಬಗ್ಗೆ ಮಾತನಾಡಿದ್ದಾರೆ. ಕೆಎಂಎಫ್ ಬೆಳವಣಿಗೆಯಲ್ಲಿ ರೇವಣ್ಣ ಅವರ ಕೊಡುಗೆಯೂ ಬಹಳಷ್ಟಿದೆ ಎಂದು ಶ್ಲಾಘಿಸಿದರು.
ಮೇವಿನ ರಫ್ತಿಗೆ ನಿರ್ಬಂಧ: ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹೊರರಾಜ್ಯಗಳಿಗೆ ಮೇವು ಸಾಗಾಟ ಮಾಡುವುದನ್ನು ನಿರ್ಬಂಧಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಣ ಹುಲ್ಲನ್ನು ಬಂಡಲ್ ಕಟ್ಟಿ ಸಂಗ್ರಹಿಸಲಾಗುತ್ತಿದೆ.ಎಲ್ಲಿ ಮೇವಿನ ಅಗತ್ಯವಿದೆಯೋ ಅಲ್ಲಿಗೆ ಕಳುಹಿಸಲಾಗುವುದು.ಸದ್ಯಕ್ಕೆ ಮೇವಿನ ಕೊರತೆ ಎಲ್ಲೂ ಕಂಡುಬಂದಿಲ್ಲ ಎಂದರು.
ಜಾನುವಾರುಗಳ ಮೇವು ಉತ್ಪಾದನೆಗಾಗಿ 15 ಕೋಟಿ ರೂ. ಮೊತ್ತದ ಮೇವಿನ ಬೀಜಗಳನ್ನು ರೈತರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.