ಅನಂತ್‍ಕುಮಾರ್ ಸ್ಥಾನಕ್ಕೆ ಬಿ.ಎಲ್.ಸಂತೋಷ್ : ಆರ್‍ಎಸ್‍ಎಸ್ ಚಿಂತನೆ

ಮೂಲಗಳ ಪ್ರಕಾರ ಅನಂತಕುಮಾರ್ ಅವರ ಸ್ಥಾನಕ್ಕೆ ಸಂಘಪರಿವಾರದ ಅಚ್ಚುಮೆಚ್ಚಿನ ನಾಯಕ ಹಾಗೂ ಸಂಘಟನೆಯಲ್ಲಿ ಅವರಷ್ಟೇ ಚಾಣಾಕ್ಷ ಎನಿಸಿರುವ ಬಿ.ಎಲ್.ಸಂತೋಷ್ ಹೆಗಲಿಗೆ ಜವಾಬ್ದಾರಿ ನೀಡಲು ಆರ್‍ಎಸ್‍ಎಸ್ ಚಿಂತನೆ ನಡೆಸಿದೆ.

ಸದ್ಯಕ್ಕೆ ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನೆ ಕಾರ್ಯದರ್ಶಿಯಾಗಿರುವ ಸಂತೋಷ್, ತೆರೆಮರೆಯಲ್ಲಿ ಕುಳಿತು ರಣತಂತ್ರ ರೂಪಿಸುವುದರಲ್ಲಿ ಸಿದ್ಧಹಸ್ತರು. ವಹಿಸಿದ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಿರ್ವಹಣೆ ಮಾಡುವುದರಲ್ಲಿ ಎತ್ತಿದ ಕೈ.

ಇತ್ತೀಚೆಗೆ ಕೇರಳದ ಸುಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.ಈ ತೀರ್ಪಿನ ವಿರುದ್ಧ ಕೇರಳದಾದ್ಯಂತ ಭಕ್ತಾದಿಗಳನ್ನು ಸಂಘಟಿಸಿ ಯಶಸ್ವಿ ಹೋರಾಟ ನಡೆಸಲಾಗಿತ್ತು.ಇದರ ಸೂತ್ರಧಾರರೇ ಸಂತೋಷ್ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.

ಬಿಜೆಪಿ ಮತ್ತು ಪರಿವಾರದ ನಾಯಕರ ನಡುವೆ ಸಮನ್ವಯ ಸಾಧಿಸುವ ಚಾಕಚಕ್ಯತೆ ಹೊಂದಿರುವ ಸಂತೋಷ್, ಈವರೆಗೂ ಯಾವುದೇ ನೇರ ಚುನಾವಣೆ ಎದುರಿಸಿದವರಲ್ಲ. ಅಲ್ಲದೆ ಅವರಿಗೆ ಅಂತಹ ರಾಜಕೀಯ ಮಹತ್ವಾಕಾಂಕ್ಷಿಯೂ ಇಲ್ಲ. ಕೆಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಕೇಳಿಬಂದಿತ್ತಾದರೂ ಅದು ಅಷ್ಟೇ ವೇಗವಾಗಿ ಮರೆಯಾಗಿತ್ತು.

ಸಾಮಾನ್ಯವಾಗಿ ಎಂದೂ ಮಾಧ್ಯಮಗಳ ಎದುರು ಬಹಿರಂಗ ಹೇಳಿಕೆ ನೀಡದ ಅವರು ಸದಾ ಹಸನ್ಮುಖಿಯಾಗಿರುತ್ತಾರೆ.ಪಕ್ಷ ಸಂಘಟನೆ, ರಣತಂತ್ರ ಸೇರಿದಂತೆ ಚುನಾವಣೆ ಗೆಲ್ಲಲು ಯಾವೆಲ್ಲಾ ತಂತ್ರ ಅನುಸರಿಸಬೇಕೋ ಅವೆಲ್ಲವನ್ನೂ ಅವರು ಕರಗತ ಮಾಡಿಕೊಂಡಿದ್ದಾರೆ.
ಈಗ ಅನಂತಕುಮಾರ್ ಅವರ ನಿಧನದಿಂದ ಸಂತೋಷ್‍ಗೆ ಆ ಜವಾಬ್ದಾರಿಯನ್ನು ನೀಡಲು ರಾಷ್ಟ್ರೀಯ ನಾಯಕರು ಗಂಭೀರ ಆಲೋಚನೆ ಮಾಡಿದ್ದಾರೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವುದು ಅನಿವಾರ್ಯವಾಗಿರುವುದರಿಂದ ಕೇಸರಿ ಪಡೆ ರಣತಂತ್ರ ರೂಪಿಸುತ್ತಿದೆ.

ಸಂಬಂಧ ಅಷ್ಟಕ್ಕಷ್ಟೆ

ಇನ್ನು ಬಿ.ಎಲ್.ಸಂತೋಷ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಯೂರಪ್ಪ ಅವರ ನಡುವಿನ ಸಂಬಂಧ ಹಾವು ಮುಂಗುಸಿಯಂತಿದೆ.
ಈ ಹಿಂದೆ ತಮ್ಮೆಲ್ಲಾ ಕಷ್ಟಗಳಿಗೂ ಸಂತೋಷ್ ಕಾರಣಕರ್ತರು ಎಂಬುದು ಯಡಿಯೂರಪ್ಪ ಅವರ ಆರೋಪವಾಗಿತ್ತು.ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದು, ಪಕ್ಷ ಬಿಟ್ಟು ಹೋಗಲು ಹಾಗೂ ತಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದು, ಪಕ್ಷದಲ್ಲಿ ತಮ್ಮ ವಿರುದ್ಧ ಭಿನ್ನಮತ ಸೃಷ್ಟಿಸಲು ಸಂತೋಷ್ ಕೈವಾಡವೇ ಕಾರಣ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿದ್ದವು.
ಆದರೆ ಈಗ ಅನಂತ ಕುಮಾರ್ ಇಲ್ಲದ ಕಾರಣ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಸಂತೋಷ್‍ಗೆ ನೀಡುತ್ತಿರುವುದರಿಂದ ಅನಿವಾರ್ಯವಾಗಿ ಯಡಿಯೂರಪ್ಪ ಒಪ್ಪಿಕೊಳ್ಳಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ