ಬೆಂಗಳೂರು, ನ.14- ಬೆಳೆ ಸಾಲ ಮಾಡಿದ ರೈತರು ಸಾಲ ಮರುಪಾವತಿಸಿಲ್ಲವೆಂದು ನೋಟಿಸ್ ನೀಡಿದರೆ ಅಂತಹ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದರು.
ವಿಧಾನಸೌಧದ ಮುಂಭಾಗ ಪಂಡಿತ್ ಜವಹರಲಾಲ್ ನೆಹರು ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆ ಸಾಲ ಮಾಡಿದ ಪ್ರಕರಣದಲ್ಲಿ ಬಂಧನದ ವಾರೆಂಟ್ ನೀಡಿದರೆ ಅಂತಹ ಬ್ಯಾಂಕುಗಳ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾ ಮಾಡಲು ನಿರ್ಧರಿಸಿ ಸಾಲ ನೀಡಿರುವ ಬ್ಯಾಂಕುಗಳ ಹಣವನ್ನು ಮರುಪಾವತಿಗೆ ಕ್ರಮವಹಿಸುತ್ತಿದೆ. ಹಾಗಿದ್ದರೂ ವಿನಾಕಾರಣ ರೈತರಿಗೆ ನೋಟಿಸ್ ನೀಡಿ ತೊಂದರೆ ಕೊಡುವುದು ಬೇಡ ಎಂದು ಹೇಳಿದರು.
ರೈತರ ಬೆಳೆ ಸಾಲ ಮನ್ನಾ ಮಾಡುತ್ತೇವೆ ಎಂಬ ವಿಚಾರದಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು, ಬೆಳೆಗಾವಿ, ಬೈಲಹೊಂಗಲದ ರೈತ ಕುಟುಂಬಗಳು ಮಾಡಿರುವ ಬೆಳೆ ಸಾಲವನ್ನು ಸಾಲ ಮನ್ನಾ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದರು.
ತಾಯಿ-ಮಗು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಇನ್ಸ್‍ಪೆಕ್ಟರ್‍ಗೆ ಸೂಚನೆ ನೀಡಿ ನೋಟಿಸ್ ನೀಡಿದ ಬ್ಯಾಂಕ್ ವ್ಯವಸ್ಥಾಪಕರನ್ನು ಬಂಧಿಸುವಂತೆ ಸೂಚಿಸಲಾಗಿತ್ತು. ಆದರೆ, ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಈ ಪ್ರಕರಣದಲ್ಲಿ ಅವರು ಮಾಡಿದ್ದು ಬೆಳೆ ಸಾಲವಲ್ಲ. ಮನೆ ಕಟ್ಟಲು ಅವರ ಮಾವ ಬ್ಯಾಂಕಿನಿಂದ ಸಾಲ ಪಡೆದಿದ್ದರು.ಅದಕ್ಕಾಗಿ ನೋಟಿಸ್ ನೀಡಲಾಗಿತ್ತು.ಇದೇ ರೀತಿ ಬೇರೆ ಬೇರೆ ಉದ್ದೇಶಕ್ಕೆ ಸಾಲ ಮಾಡಿರುತ್ತಾರೆ.ಅದನ್ನು ಪರಿಶೀಲಿಸಿ ಬೆಳೆ ಸಾಲ ಮಾಡಿದವರಿಗೆ ನೋಟಿಸ್ ನೀಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.