ಬೆಂಗಳೂರು, ನ.13-ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಲಘು ಭೂಕಂಪನ ಸಂಭವಿಸಿದೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗುಡ್ಡದ ನೇರಳೆಕೆರೆ ಮತ್ತು ಕಂಚೀಪುರದಲ್ಲಿ ಭೂಕಂಪನವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
ಲಘು ಭೂಕಂಪನವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಗುಡ್ಡದ ನೇರಳೆಕೆರೆ ಗ್ರಾಮದ ಈಶಾನ್ಯ ಭಾಗದ 200 ಮೀಟರ್ ದೂರದಲ್ಲಿ ಬೆಳಗ್ಗೆ 10.23ರಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಇದರಿಂದ ಜನ ಆತಂಕಗೊಂಡು ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಭೂಕಂಪನ ತೀವ್ರತೆ ಅಳೆಯುವ ಸಿಸ್ಮೋಗ್ರಾಫ್ ಮಾಪನದಲ್ಲಿ ಕಂಪನದ ತೀವ್ರತೆ 1.6 ಮ್ಯಾಗ್ನಟ್ಯೂಡ್ ಎಂದು ನಮೂದಾಗಿದೆ. ಅದೇ ರೀತಿ ಹೊಸದುರ್ಗ ತಾಲೂಕಿನ ಕಂಚೀಪುರದಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಲಘು ಭೂಕಂಪವಾಗಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಭೂಕಂಪನದಿಂದ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿಲ್ಲ. ಆದರೆ ಕೆಲ ಕಾಲ ಭೂಮಿ ನಡುಗಿದಾಗ ಜನ ಭಯಭೀತರಾಗಿದ್ದಾರೆ.