ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ತಡೆ

ಬೆಂಗಳೂರು, ನ.13-ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿದ್ದ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ರಾಜ್ಯಸರ್ಕಾರ ತಡೆ ನೀಡಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ನೂರಾರು ಹುದ್ದೆಗಳಿಗೆ ನೇಮಕಾತಿ ನಡೆಸಲು 2017ರ ಜು.17 ರಂದು ಸರ್ಕಾರದ ಸುತ್ತೋಲೆ ಸಂಖ್ಯೆ ಇಡಿ-136-ಯುಎನ್‍ಇ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿತ್ತು.

ಅದರಂತೆ ನೇಮಕಾತಿ ಪ್ರಕ್ರಿಯೆಗಳು ಆರಂಭಗೊಂಡಿದ್ದವು. ಆದರೆ ಸಾರ್ವಜನಿಕರು, ಅಭ್ಯರ್ಥಿಗಳು ಹಾಗೂ ಮಾಧ್ಯಮಗಳಿಂದ ಕೇಳಿ ಬಂದ ಆಕ್ಷೇಪಣೆಗಳನ್ನು ಆಧರಿಸಿ ನೇಮಕಾತಿಗೆ ತಡೆ ನೀಡಲಾಗಿದೆ.

ಯುಜಿಸಿ ನಿಯಮಾವಳಿಗಳ ಪ್ರಕಾರ ನೇಮಕಾತಿಗಳು ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ವಿವಿಗಳ ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಇತರ ಶೈಕ್ಷಣಿಕ ಸಿಬ್ಬಂದಿ ನೇಮಕಾತಿಗೆ ಕನಿಷ್ಠ ಅರ್ಹತೆ, ಮಾನದಂಡ ಹಾಗೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣೆ 2010ರ ಕಾಯ್ದೆಯಲ್ಲಿ ಬೋಧಕರ ನೇಮಕಾತಿಗೆ 100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲು ಅವಕಾಶವಿರುವುದಿಲ್ಲ. ಆದರೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವ ವಿಶ್ವವಿದ್ಯಾನಿಲಯಗಳು ಲಿಖಿತ ಪರೀಕ್ಷೆ ಆಯೋಜಿಸಿವೆ.

ಯುಜಿಸಿ ನಿಯಮಾವಳಿಗಳ ಪ್ರಕಾರ ಅರ್ಹರಿರುವ ಎಲ್ಲಾ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಅವಕಾಶವಿದೆ. ಆದರೆ ಇದಕ್ಕೆ ವಿರುದ್ಧವಾಗಿ ಲಿಖಿತ ಪರೀಕ್ಷೆಯ ಆಧಾರದ ಮೇಲೆ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲು ಸುತ್ತೋಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಅರ್ಹರು ನೇಮಕಾತಿ ಅವಕಾಶದಿಂದ ವಂಚಿತರಾಗುವುದಲ್ಲದೆ, ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗುತ್ತದೆ ಎಂಬ ಆಕ್ಷೇಪಗಳು ಕೇಳಿ ಬಂದಿದ್ದವು.

ಸಹ ಪ್ರಾಧ್ಯಾಪಕರ ನೇಮಕಾತಿಗೆ ಕನಿಷ್ಠ 8 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ನೇರ ನೇಮಕಾತಿಯಲ್ಲಿ ವಿವಿಗಳು 5 ವರ್ಷದ ಅನುಭವವಿದ್ದರೆ ಸಾಕು ಎಂದು ತಿಳಿಸಲಾಗಿದೆ.

ನೇರ ನೇಮಕಾತಿಯಿಂದ ಪಾರದರ್ಶಕತೆ ಕಾಪಾಡಲು ಸಾಧ್ಯವಾಗುವುದಿಲ್ಲ. ಸ್ವಜನ ಪಕ್ಷಪಾತಕ್ಕೆ ಅವಕಾಶ ನೀಡಿದಂತಾಗುತ್ತದೆ. ಕೆಲವು ವಿವಿಗಳು ಲಿಖಿತ ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸದೆÉ ಅಕ್ರಮ ಮಾಡಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಸಾರ್ವಜನಿಕರು, ಅಭ್ಯರ್ಥಿಗಳು ಹಾಗೂ ತಜ್ಞರಿಂದ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಶ್ರಾಂತ ಕುಲಪತಿ ಪೆÇ್ರ.ವಿ.ವಿ.ಕುಟಿನ್ಹೊ ಅವರ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿದ್ದು, ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ ವಿವಿಗಳಲ್ಲಿ ನಡೆಯುತ್ತಿದ್ದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಗೆ ತಡೆ ನೀಡಲಾಗಿದೆ. ಮುಂದಿನ ಆದೇಶದವರೆಗೂ ನೇಮಕಾತಿ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ಇದೆ ಎಂದು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ