ಅನಂತಕುಮಾರ್ ಅವರನ್ನು ಕಳೆದುಕೊಂಡಿರುವುದು ನಮಗೆ ದಿಕ್ಕೇ ತೋಚದಂತಾಗಿದೆ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ನ.12- ರಾಜಕಾರಣದಲ್ಲಿ ನನಗೆ ಹೆಜ್ಜೆ ಹೆಜ್ಜೆಗೂ ಸಲಹೆ ಸಹಕಾರ ನೀಡುತ್ತಿದ್ದ ಆಪ್ತರೆಂದರೆ ಅನಂತಕುಮಾರ್. ಅವರನ್ನು ಕಳೆದುಕೊಂಡಿದ್ದರಿಂದ ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದುಃಖಿಸಿದ್ದಾರೆ.

ಅನಂತ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಂತ ಕುಮಾರ್ ಬೆಂಗಳೂರಿನ ಶಾಸಕರ ಭವನಕ್ಕೆ ಬಂದಾಗ ಕೋಟ್ ಹಾಕಿಕೊಂಡು ಹೈಕೋರ್ಟ್‍ನಲ್ಲಿ ವಕೀಲಿಗಿರಿ ಮಾಡಲು ಹೊರಟಿದ್ದರು. ನಿಮಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ, ಇಲ್ಲೇ ಮುಂದುವರೆಯಿರಿ ಎಂದು ಸಲಹೆ ನೀಡಿದ್ದೆ. ನನ್ನ ಮಾತಿಗೆ ಬೆಲೆ ಕೊಟ್ಟ ಅವರು ನನ್ನ ಜೊತೆ ನಿರಂತರವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡರು. ನಾವಿಬ್ಬರು ಶಾಸಕರ ಭವನದ 154 ಕೊಠಡಿ ಸಂಖ್ಯೆಯಲ್ಲಿ ಇರುತ್ತಿದ್ದೆವು. ದಶಕಗಳ ಕಾಲ ಜತೆಯಲ್ಲೇ ರಾಜ್ಯ ಪ್ರವಾಸ ಮಾಡಿದ್ದೆವು.

ಅವರು ಮದುವೆಯಾದ ಮೇಲೆ ಲೋಕಸಭೆ ಉಪಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನಯ್ಯ ಅವರ ಮನೆಯಲ್ಲಿ ನಾನು, ಅನಂತ್‍ಕುಮಾರ್ ಮತ್ತು ಅನಂತ್‍ಕುಮಾರ್ ಅವರ ಶ್ರೀಮತಿ ಇದ್ದುಕೊಂಡು ಪಕ್ಷ ಸಂಘಟನೆ ಮಾಡಿದ್ದೆವು. ವರ್ಷಾನುಗಟ್ಟಲೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೆವು. ಪ್ರತಿ ಹಂತದಲ್ಲೂ ಅವರು ಸಲಹೆ ನೀಡುತ್ತಿದ್ದರು. ಅವರಿಲ್ಲದೆ ನಾವು ಬೀದಿ ಪಾಲಾಗಿದ್ದೇವೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ದೇಶದ ಎಲ್ಲಾ ರಾಜ್ಯಗಳ ಸಿಎಂಗಳು, ಮಾಜಿ ಸಿಎಂಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ರಾಜಕಾರಣಿ ಅನಂತ್‍ಕುಮಾರ್. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಉತ್ತಮ ಕೊಂಡಿಯಾಗಿದ್ದರು. ಜನ ಸಾಮಾನ್ಯರು, ಕಾರ್ಯಕರ್ತರು ಸುಲಭವಾಗಿ ಅನಂತಕುಮಾರ್ ಅವರನ್ನು ಭೇಟಿ ಮಾಡಬಹುದಿತ್ತು. ರಾಜ್ಯದಿಂದ ದೆಹಲಿಗೆ ಯಾರೇ ಹೋದರೂ ಮಾತನಾಡಿಸಿ ಅವರ ಕೆಲಸ ಏನು ಎಂದು ಕೇಳಿ, ಸಂಬಂಧ ಪಟ್ಟ ಸಚಿವರು ಅಧಿಕಾರಿಗಳ ಜೊತೆ ನೇರವಾಗಿ ಮಾತನಾಡಿ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರು. ಅನಂತ ಕುಮಾರ್ ಜನ ಸಾಮಾನ್ಯರ ನಾಯಕ ಎಂದು ಶೋಕಿಸಿದ್ದಾರೆ.
ನಾನು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾದಾಗ ಹಣಕಾಸು ಖಾತೆ ತೆಗೆದುಕೊಳ್ಳುವಂತೆ ಅನಂತ್‍ಕುಮಾರ್ ಸಲಹೆ ನೀಡಿದ್ದರು. ಹಾಗಾಗಿಯೇ ರಾಜ್ಯದಲ್ಲಿ ನಾನು ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಯಿತು.

ವಿದ್ಯಾರ್ಥಿ ಪರಿಷತ್‍ನಿಂದ ಸಂಘಟನೆಗೆ ಬಂದ ಅವರು, ರಾಷ್ಟ್ರಮಟ್ಟದಲ್ಲಿ ಅತಿ ಎತ್ತರಕ್ಕೆ ಬೆಳೆದ ನಾಯಕ. ಆರು ಬಾರಿ ಸಂಸದರಾಗಿ, ವಾಜಪೇಯಿ ಮತ್ತು ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ಮೆಟ್ರೊ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲು ಅನಂತ್‍ಕುಮಾರ್ ಅವರೇ ಕಾರಣ.

ಕಳೆದ ಮೂರು ದಿನಗಳ ಹಿಂದಷ್ಟೇ ಅನಂತ್‍ಕುಮಾರ್ ಅವರನ್ನು ನಾನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರ ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದರು. ನಾನು ಕಲಬುರಗಿ ಪ್ರವಾಸೋದ್ಯಮಕ್ಕೆ ತೆರಳಿದೆ. ಅಲ್ಲಿಂದ ವಾಪಸ್ ಮರುಳಿದ ನಂತರ ಅನಂತ್‍ಕುಮಾರ್ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ ಬಂದಿದೆ.
ಪಕ್ಷ ಸಂಘಟನೆಗೆ ಅವರ ಕೊಡುಗೆ ಅಪಾರ, ರಾಜ್ಯದ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಿಲ್ಲದೆ ಮುಂದಿನ ದಾರಿ ನೆನೆಪಿಸಿಕೊಳ್ಳುವುದೇ ಕಷ್ಟವಾಗುತ್ತದೆ ಎಂದು ಬಿಎಸ್‍ವೈ ಶೋಕಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ