ಅನಂತ್‍ಕುಮಾರ್ ಜೀವನ-ಸಾಧನೆ

ಬೆಂಗಳೂರು, ನ.12- ವಿದ್ಯಾರ್ಥಿ, ನಾಯಕನಿಂದ ಹಿಡಿದು ಕೇಂದ್ರ ಸಚಿವ ಸ್ಥಾನದವರೆಗೆ ಸಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದವರು ಅನಂತ್‍ಕುಮಾರ್.
ವಿದ್ಯಾರ್ಥಿ ದಿಸೆಯಿಂದಲೇ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಅನಂತ್‍ಕುಮಾರ್ ಅವರು 1987ರಲ್ಲಿ ಬಿಜೆಪಿ ಸೇರಿದ್ದರು. ಇವರ ಬದ್ಧತೆ ಮತ್ತು ಕಾರ್ಯದಕ್ಷತೆ ಭಾಷೆಯ ಮೇಲಿನ ಹಿಡಿತದಿಂದಾಗಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದರು.

1995ರಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹುದ್ದೆಗೇರಿದರು. ನಂತರ 1996ರ ಲೋಕಸಭೆ ಚುನಾವಣೆಗೆ ಟಿಕೆಟ್ ಪಡೆದು ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಹಿಂದುರುಗಿ ನೋಡಲೇ ಇಲ್ಲ. ನಿರಂತರವಾಗಿ ಆರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹೆಗ್ಗಳಿಕೆ ಅವರದು.

ವಾಯಜಪೇಯಿ ಆಡಳಿತಾವಧಿಯಲ್ಲಿ ಅವರ ಪರಮಾಪ್ತರಾಗಿದ್ದ ಅವರು, ಅಡ್ವಾಣಿ ಅವರ ನೀಲಿಕಣ್ಗಳ ಹುಡುಗ ಎಂದೇ ಬಿಂಬಿತವಾಗಿದ್ದರು. ಕೇಂದ್ರ ನಗರಾಭಿವೃದ್ಧಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಅಲ್ಲದೆ ಕೇಂದ್ರ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದೇಶದಲ್ಲಿ ಬಿಜೆಪಿಯನ್ನು ಸಂಘಟಿಸುವಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದರು.
ಅನಂತ್‍ಕುಮಾರ್ ಓರ್ವ ಸೂಕ್ಷ್ಮಮತಿ ರಾಜಕಾರಣಿ. ಸಜ್ಜನ ಮತ್ತು ಜನಾನುರಾಗಿ. ಬೆಂಗಳೂರು ದಕ್ಷಿಣದಲ್ಲಿ ಯಾವತ್ತೂ ಕೋಮು ದ್ವೇಷ ಹರಡದಂತೆ ಸದಾ ಎಚ್ಚರಿಕೆಯ ಮತ್ತು ಜವಾಬ್ದಾರಿಯುತ ರಾಜಕಾರಣ ಮಾಡುತ್ತಾ ಬಂದವರು.

ಅನಿವಾರ್ಯವಾದಾಗ ಸೈದ್ಧಾಂತಿಕವಾಗಿ ಹೇಳಿಕೆ ನೀಡಿದ್ದನ್ನು ಬಿಟ್ಟರೆ ಸಮಾಜಕ್ಕೆ ವಿಷ ಬೀಜ ಬಿತ್ತುವಂತಹ ಯಾವುದೇ ಹೇಳಿಕೆಗಳನ್ನು ನೀಡದೆ ಸಂಯಮದಿಂದ ಸಾಂಸ್ಕøತಿಕ ಹಿರಿಮೆಯನ್ನು ಸದಾ ಸಂರಕ್ಷಿಸುತ್ತಾ 22 ವರ್ಷ ಅನಂತ್‍ಕುಮಾರ್ ಅವರು ಬೆಂಗಳೂರು ದಕ್ಷಿಣವನ್ನು ಆಳಿದ್ದು ವಿಶೇಷ .
ಅನಂತ್ ಅವರ ರಾಜಕೀಯ ಪಯಣ:
1982ರಿಂದ 95ರವರೆಗೆ ಎಬಿವಿಪಿ ಕಾರ್ಯದರ್ಶಿಯಾಗಿ ಸೇವೆ, ನಂತರ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪದೋನ್ನತಿ, 1995ರಿಂದ 98ರಲ್ಲಿ ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಹುದ್ದೆ, 1996, 98, 99, 2004, 2009 ಮತ್ತು 2014ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸತತವಾಗಿ ಸಂಸತ್‍ಗೆ ಆಯ್ಕೆ.
1998ರಲ್ಲಿ ಕೇಂದ್ರ ನಾಗರಿಕರ ವಿಮಾನ ಯಾನ ಸಚಿವರಾಗಿ ಆಯ್ಕೆ, 2007ರಲ್ಲಿ ಆರ್ಥಿಕ ಮತ್ತು ವಾಣಿಜ್ಯ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆ, 2014ರಲ್ಲಿ ಕೇಂದ್ರ ರಾಸಾಯಿಕ, ಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಆಯ್ಕೆ.

ಅನಂತ್ ಹೋರಾಟ:
ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಕಾಲದಲ್ಲಿ 40 ದಿವಸ ಜೈಲಿನಲ್ಲಿದ್ದು, ತುರ್ತು ಪರಿಸ್ಥಿತಿ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರ ಪ್ರಜಾತಂತ್ರ ಉಳಿವಿನ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ರಾಜಕಾರಣಕ್ಕೆ ಬಂದವರು. ನಿರಂತರ ಜನಸೇವೆ ಹಿನ್ನೆಲೆಯಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದ್ದು, 59ನೇ ವಯಸ್ಸಿನಲ್ಲೇ ನಿಧನಕ್ಕೆ ಕಾರಣವಾಗಿದೆ.

ಅನಂತ್‍ಕುಮಾರ್ ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆರ್‍ಎಸ್‍ಎಸ್ ತತ್ವಗಳಿಂದ ಪ್ರೇರೆಪಿತರಾಗಿದ್ದ ಅವರು, ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು.
ಬಿಜೆಪಿ ಪಕ್ಷದ ನಾಯಕರಾಗಿದ್ದ ಅನಂತ್‍ಕುಮಾರ್ ಒಬ್ಬ ಯಶಸ್ವಿ ರಾಜಕಾರಣಿಯೂ ಹೌದು. ಯಾರನ್ನೂ ನೋಯಿಸದೆ, ಯಾರೊಂದಿಗೂಜೀವನ ವಿರೋಧ ಕಟ್ಟಿಕೊಳ್ಳದೆ ಚಾಣಾಕ್ಷತನವಾಗಿ ರಾಜಕಾರಣ ಮಾಡುತ್ತಿದ್ದರು.

ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು.
ಅನಂತ್‍ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್‍ಕುಮಾರ್ ಅವರು ಸಾವಿರಾರು ಶಾಲಾ ಮಕ್ಕಳಿಗೆ ಅದಮ್ಯ ಚೇತನ ಮೂಲಕ ನೀಡುವ ಬಿಸಿಯೂಟ ಯೋಜನೆ ಹಾಗೂ ಇನ್ನಿತರೆ ಸಾಮಾಜ ಸೇವಾ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದರು.
ಸಂಸತ್‍ನಲ್ಲಿ ಉತ್ತಮ ಚರ್ಚಾಪಟುವಾಗಿದ್ದರು. ಅಲ್ಲದೆ, ಬಹಿರಂಗ ಭಾಷಣಗಳನ್ನು ಪ್ರಾಸಬದ್ಧವಾಗಿ ಮಾಡುತ್ತಾ ಜನರನ್ನು ಆಕರ್ಷಿಸುತ್ತಿದ್ದರು. ಅನಂತ್‍ಕುಮಾರ್ ಅವರು ಇಂದು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ