ತ್ವರಿತಗತಿಯಲ್ಲಿ ಅಯೋಧ್ಯೆ ರಾಮಮಂದಿರ ವಿವಾದದ ವಿಚಾರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಅಯೋಧ್ಯೆಯ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಯೋಧ್ಯೆ ರಾಮಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಹಾಗೂ ನ್ಯಾ. ಎಸ್.ಕೆ.ಕೌಲ್ ಅವರಿದ್ದ ದ್ವಿ-ಸದಸ್ಯ ಪೀಠ ತಿರಸ್ಕರಿದೆ.

ಅಖಿಲಾ ಭಾರತ ಹಿಂದೂ ಮಹಾಸಭಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಈಗಾಗಲೇ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಿದ್ದೇವೆ. ಅಲ್ಲದೇ ಅರ್ಜಿಯ ವಿಚಾರಣೆಗಳನ್ನು ಜನವರಿಯಲ್ಲಿ ಪರಿಶೀಲಿಸುತ್ತೇವೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಪೀಠ ನಿರಾಕರಿಸಿದೆ.

2010ರ ಆಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ಅಕ್ಟೋಬರ್ 29ರಂದು ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗಾಯ್ ನ್ಯಾ. ಎಸ್.ಕೆ.ಕೌಲ್ ಹಾಗೂ ಕೆ.ಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ಜನವರಿ, ಫೆಬ್ರವರಿ ಇಲ್ಲವೇ ಮೇ ತಿಂಗಳಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿ ಮುಂದೂಡಿತ್ತು. ನಮಗೆ ನಮ್ಮದೇ ಆದ ಆದ್ಯತೆಗಳಿವೆ. ಹೀಗಾಗಿ ಅಯೋಧ್ಯೆ ಕುರಿತು ಪ್ರತಿನಿತ್ಯ ವಿಚಾರಣೆ ನಡೆಸಬೇಕೇ? ಬೇಡವೇ ಎನ್ನುವ ಬಗ್ಗೆ ತೀರ್ಮಾನವನ್ನು ಅಂದೇ ಕೈಗೊಳ್ಳುತ್ತೇವೆಂದು ಪೀಠ ತಿಳಿಸಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ