ಬೆಂಗಳೂರು, ನ.12- ಕೇಂದ್ರ ಸಚಿವ ಅನಂತ್ಕುಮಾರ್ ಅವರು ರಾಷ್ಟ್ರಮಟ್ಟದ ನಾಯಕರಾಗಿದ್ದರೂ ಅವರ ಮಾತೃ ಭಾಷಾ ಪ್ರೇಮ ಅಮೋಘವಾದದ್ದು.
ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲೇ ಮಾತನಾಡಿ ಇತಿಹಾಸ ಸೃಷ್ಟಿಸಿದ್ದು ಅನಂತ್ಕುಮಾರ್. ಅನಂತ್ಕುಮಾರ್ ಅವರಿಗೆ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳ ಮೇಲೆ ಹಿಡಿತವಿದ್ದರೂ ಅವರ ಜೀವನದುದ್ದಕ್ಕೂ ಮಾತೃ ಭಾಷೆಗೆ ಆದ್ಯತೆ ಕೊಟ್ಟ ಅಪ್ಪಟ ಕನ್ನಡ ಪ್ರೇಮಿ.
ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದಾಗಲೂ ಅನಂತ್ಕುಮಾರ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅನಂತರ ಆರು ಬಾರಿ ಸಂಸದರಾಗಿ ಆಯ್ಕೆಯಾದರೂ ಆರೂ ಬಾರಿಯೂ ಲೋಕಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ ಭಾಷಾ ಪ್ರೇಮ ಮೆರೆದಿದ್ದರು.
ಕೇಂದ್ರ ಸಚಿವರಾಗಿದ್ದ ಅವರು ಪ್ರತಿ ಕಡತಕ್ಕೂ ಕನ್ನಡ ಭಾಷೆಯಲ್ಲೇ ಸಹಿ ಮಾಡುತ್ತಿದ್ದದ್ದು ವಿಶೇಷ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಅನಂತ್ಕುಮಾರ್ ಅವರ ಹೆಸರಿನಲ್ಲಿ ಸಾಕಷ್ಟು ಪ್ರಕಟಣೆಗಳು, ಸೂಚನಾ ಪತ್ರಗಳು ಪಕ್ಷದಿಂದ ಹೊರ ಬೀಳುತ್ತಿದ್ದವು. ಅವೆಲ್ಲವಕ್ಕೂ ಕನ್ನಡದಲ್ಲೇ ಸಹಿ ಮಾಡುತ್ತಿದ್ದ ಅನಂತ್ಕುಮಾರ್ ಮಾತೃ ಭಾಷಾ ಪ್ರೇಮದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ.
ಹಾಗೆಂದು ತಾವು ಅಪ್ಪಟ ಕನ್ನಡ ಪ್ರೇಮಿ ಎಂದು ಅನಗತ್ಯವಾಗಿ ಕೊಚ್ಚಿಕೊಂಡವರೂ ಅಲ್ಲ. ಭಾಷಾ ಪ್ರೇಮ ಎಂಬುದು ಹೃದಯದಲ್ಲಿರಬೇಕು. ಸಮಯ ಬಂದಾಗ ಅದು ಅಭಿವ್ಯಕ್ತಿಗೊಳ್ಳಬೇಕು ಎಂಬುದು ಅವರ ವಾದ ವಾಗಿತ್ತು.
ಸಂಸತ್ನ ಕಾರಿಡಾರ್ನಲ್ಲಿ ಕನ್ನಡ ಕಾರ್ನರ್ ಸ್ಥಾಪಿಸಿ ಅಲ್ಲಿ ಕನ್ನಡ ಪತ್ರಿಕೆಗಳು, ಮತ್ತು ಇತರೆ ಪುಸ್ತಕಗಳು ದೊರೆಯುವಂತೆ ಮಾಡಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಅನಂತ್ಕುಮಾರ್ ಅವರು ಕನ್ನಡದ ಕಟ್ಟಾಳುವಾಗಿ ಸೆಟೆದು ನಿಲ್ಲುತ್ತಿದ್ದರು.
ಕೇವಲ ತೋರ್ಪಡಿಕೆಗಾಗಿ ಅಥವಾ ಪ್ರಚಾರಕ್ಕಾಗಿ ಮಾತೃ ಭಾಷಾ ಪ್ರೇಮಿಯಂತೆ ನಟಿಸಲಿಲ್ಲ. ತಮಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಅಪಾರ ಜ್ಞಾನ ಇದ್ದರೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಸಂಬದ್ದತೆ ಅವಕಾಶ ಇಲ್ಲದಂತೆ ಕನ್ನಡ ಭಾಷೆಯನ್ನು ಬಳಸಿ ಮೆಚ್ಚುಗೆ ಗಳಿಸುತ್ತಿದ್ದರು.
ಕರ್ನಾಟಕದ ರಾಜಕಾರಣಿಗಳ ಪೈಕಿ ರಾಷ್ಟ್ರ ನಾಯಕರಿಗೆ ಹೆಚ್ಚು ಪ್ರಿಯರಾದವರಲ್ಲಿ ಅನಂತ್ಕುಮಾರ್ ಮೊದಲಿಗರು. ಅದಕ್ಕೆ ಕಾರಣ ಅವರ ಭಾಷೆ ಮೇಲಿನ ಹಿಡಿತ. ಕೇಂದ್ರದ ನಾಯಕರ ಜತೆ ಹಿಂದಿ, ಇಂಗ್ಲಿಷ್ನಲ್ಲಿ ಅತ್ಯಂತ ಸುಲಲಿತವಾಗಿ ಸಂಭಾಷಿಸುತ್ತಿದ್ದ ಅವರು, ದಕ್ಷಿಣ ಭಾರತದ ನಾಯಕರು ಬಂದಾಗ ಅವರ ಮಾತುಗಳನ್ನು ರಾಷ್ಟ್ರೀಯ ನಾಯಕರಿಗೆ ತರ್ಜುಮೆ ಮಾಡಿ ವಿವರಿಸುವುದನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದರು. ಇದು ರಾಷ್ಟ್ರ ಮತ್ತು ಪ್ರಾದೇಶಿಕ ನಾಯಕರ ನಡುವೆ ಅನಂತ್ಕುಮಾರ್ ಕೊಂಡಿಯಾಗಲು ಸಹಕಾರಿಯಾಯಿತು.
ಒಂದು ಹಂತದಲ್ಲಿ ಕೇಂದ್ರ ನಾಯಕರಿಗೆ ಅನಂತ್ಕುಮಾರ್ ಅನಿವಾರ್ಯ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಎನ್ಡಿಎ ಮೈತ್ರಿ ಕೂಟ ಬರುವವರೆಗೂ ದೆಹಲಿಯಲ್ಲಿ ಅನಂತ್ಕುಮಾರ್ ಅತ್ಯಂತ ಪ್ರಕರ ನಾಯಕರಾಗಿ ಹೊರಹೊಮ್ಮಿದ್ದರು.
ಕರ್ನಾಟಕ ಮಾತ್ರವಲ್ಲದೆ, ದೇಶದ ನಾನಾ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಭಾಷಣ ಮಾಡುತ್ತಿದ್ದರು. ಕೆಲವು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲೇ ಭಾಷಣ ಬರೆದುಕೊಂಡು ಮನಮುಟ್ಟುವಂತೆ ಮಾತನಾಡುವ ಮೂಲಕ ಅನಂತ್ಕುಮಾರ್ ಹೆಚ್ಚು ಆಪ್ತರಾಗುತ್ತಿದ್ದರು.