ಅನಂತ ಚೇತನಕ್ಕೆ ಅನಂತ ನಮನಗಳು: ಜೋಶಿ

ಹುಬ್ಬಳ್ಳಿ 12,: ಸದಾ ಹಸನ್ಮುಖಿ ಹಾಗು ಚೈತನ್ಯದ ಚಿಲುಮೆಯಾಗಿದ್ದ ಶ್ರೀ ಅನಂತಕುಮಾರ ಈ ನಾಡು ಹಾಗು ದೇಶ ಕಂಡ ಅಪರೂಪದ ರಾಜಕೀಯ ನಾಯಕ. ವಿದ್ಯಾರ್ಥಿಪರಿಷತ್ ಸಂಘಟನೆಯಿಂದ ಆರಂಭವಾದ ಅವರ ರಾಜಕೀಯ ಜೀವನ ಪಯಣ ಅವರನ್ನು ದೇಶದ ಒಬ್ಬ ಹಿರಿಯ ಹಾಗೂ ಮುತ್ಸದ್ದಿ ರಾಜಕೀಯ ನಾಯಕರನ್ನಾಗಿ ರೂಪಿತಗೊಂಡದ್ದು ಒಂದು ರೋಚಕ ಕಥೆಯೇ ಎಂಬುದು ಶಾಲಾ ಕಾಲೇಜು ದಿನಗಳಿಂದಲೇ ಅವರ ಒಡನಾಡಿಯಾಗಿ ಬೆಳೆದ ನನಗೆ ಗೊತ್ತು. ಒಂದು ಸಾಮಾನ್ಯ ಕೆಳಮಧ್ಯಮ ವರ್ಗದ ಹಿನ್ನೆಲೆಯಲ್ಲಿ ಬಂದ ಶ್ರೀ ಅನಂತ ಕುಮಾರ ಆ ದಿನಗಳಿಂದಲೇ ಸಂಘಟನೆ, ಹೋರಾಟ, ದೇಶ, ರಾಜ್ಯ ಕಲ್ಪನೆಯ ಕನಸು ಹೊತ್ತ ದಿಟ್ಟವ್ಯಕ್ತಿ. ಅಂತೆಯೇ ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಸಿದರೂ ಹಿಂತೆಗೆಯದ ಅದಮ್ಯ ಚೇತನದ ಸ್ಪೂರ್ತಿವಂತ. ಎಂತಹ ತ್ವೇಷ ಹಾಗೂ ಗಂಭೀರ ಕ್ಷಣಗಳಲ್ಲೂ ಸಂಯಮ ಹಾಗೂ ಹಾಸ್ಯದ ಹೊನಲಿನ ಸರದಾರ ತಮ್ಮ ಸುತ್ತಲಿದ್ದವರೆಲ್ಲರನ್ನೂ ತಮ್ಮ ಹಾಸ್ಯ ಚಟಾಕಿ ಹಾಗೂ ಮುಗುಳನಗೆಯೊಂದಿಗೆ ಹುರುದುಂಬಿಸಿ ಎಂತಹುದೇ ಕ್ಲಿಷ್ಟ ಪರಿಸ್ಥಿತಿ ನಿಭಾಯಿಸುವ ಸಂಘಟನೆಯ ಚತುರ. 1999 ರ ದಶಕದ ಶ್ರೀರಾಮಜನ್ಮ ಭೂಮಿ ಹೋರಾಟ ಹಾಗೂ ಈದ್ಗಾ ರಾಷ್ಟ್ರಧ್ವಜ ಹೋರಾಟ ಹುಬ್ಬಳ್ಳಿಯಲ್ಲಿ ತೀವ್ರಗೊಂಡ ಸಂದರ್ಭದಲ್ಲಿ ಅವರ ನಾಯಕತ್ವ ಹೆಚ್ಚು ಸ್ಪುಟಗೊಂಡು ನಾನು ಈ ರಾಷ್ಟ್ರಧ್ವಜ ಹೋರಾಟದ ಮುಂಚೂಣಿಯಲ್ಲಿ ಬರುವಂತೆ ಮಾಡಿದ್ದರ ಹಿನ್ನೆಲೆ ಅವರ ನಿರಂತರ ಸ್ಪೂರ್ತಿಯೆಂಬುದನ್ನು ನಾನು ಇಂದು ನೆನೆಪಿಸಿಕೊಳ್ಳುವುದು ದೊಡ್ಡ ಮಾತೇನಲ್ಲ.

ನನ್ನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಿನಗಳಿಂದ ಸೇರಿ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲಿಯೂ ಎತ್ತಿ ಹಿಡಿದು ಮಾರ್ಗದರ್ಶನ ಮಾಡಿದ ಹಾಗೂ ಸ್ಪೂರ್ತಿ ತುಂಬಿ ಒಬ್ಬ ಉತ್ತಮ ಸಂಸದನಾಗಿ ರೂಪುಗೊಂಡಿರುವುದಲ್ಲಿ ಅವರ ಪಾತ್ರವನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ. ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಪುಸ್ತಕದಿಂದ ಹಲವಾರು ಪುಟಗಳನ್ನು ಅಳವಡಿಸಿಕೊಂಡಿರುವ ನನಗೆ ಅವರು ಗುರು, ಮಾರ್ಗದರ್ಶಕ ಹಾಗೂ ರಾಜಕೀಯ ಮತ್ತು ವೈಯಕ್ತಿಕವಾಗಿ ಅಣ್ಣನಾಗಿದ್ದರು. 1996 ರಲ್ಲಿ ಪ್ರಥಮ ಭಾರಿಗೆ ಸಂಸತ್ತಿಗೆ ಆಯ್ಕೆಯಾಗಿ ರಾಜಕೀಯ ಎತ್ತರಕ್ಕೆ ಹೋಗುವ ಅವರ ಪಯಣದಲ್ಲಿ ಹಿಂದೆಂದೂ ತಿರುಗಿ ನೋಡದೇ ಒಬ್ಬ ಶ್ರೇಷ್ಟ ಸಜ್ಜನ ಸಂಸದೀಯ ಪಟು ಹಾಗೂ ಸಮರ್ಥ ಆಡಳಿತಗಾರನಾಗಿ ರಾಜ್ಯದಲ್ಲಿ ಮನೆ ಮಾತಾದೂ ಅವರಲ್ಲಿಯ ಶ್ರೀಸಾಮಾನ್ಯ ಎಂದೂ ಬಾಡದಿರುವ ಅವರ ಈ ಅಪರೂಪದ ಗುಣದಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ.

ನನಗಿನ್ನೂ ನೆನಪು ಮಾಸಿಲ್ಲ, ಅವರು ಕೇಂದ್ರ ಸಚಿವರಾಗಿ ಹುಬ್ಬಳ್ಳಿಗೆ ಆಗಮಿಸಿದಾಗಲೆಲ್ಲಾ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನಿಂತು ಮಾತನಾಡಿಸುತ್ತಿದ್ದರು. ಹುಬ್ಬಳ್ಳಿಯ ಕಮರಿಪೇಟೆ ಪೋಲಿಸ್ ಠಾಣೆಯ ಎದುರಿಗೆ ಮಾರುತಿ ಎಂಬ ಒಬ್ಬ ಪಾದರಕ್ಷೆ ರಿಪೇರಿ ಮಾಡುತ್ತ ಕುಳಿತಿರುತಿದ್ದ ಅನಂತಕುಮಾರ ಹಾಗು ಅವರ ತಂದೆಯವರು ಅವನಿಂದ ಪಾದರಕ್ಷೆ ರಿಪೇರಿ ಮಾಡಿಸಿಕೊಳ್ಳುತ್ತಿದ್ದುದು ಒಮ್ಮೆ ಹುಬ್ಬಳ್ಳಿಗೆ ಬಂದಾಗ ನಾನು ಅವರ ಕಾರಿನಲ್ಲಿ ಅವರೊಂದಿಗೆ ಹೋಗುತ್ತಿದ್ದಾಗ ಆಕಸ್ಮಿಕ ಅದೇ ಸ್ಥಳದಲ್ಲಿ ಅವನನ್ನು ನೋಡಿ ಕಾರು ನಿಲ್ಲಿಸಿ ಕಾರಿನಿಂದ ಇಳಿದು ಬಂದು ಹ್ಯಾಂಗ ಇದ್ದೀಯಪ್ಪಾ ಮಾರುತಿ ಎಂದು ಅವನ್ನನ್ನು ಮಾತನಾಡಿಸಿ, ಪ್ರಲ್ಹಾದ ನೂರು ರೂಪಾಯಿ ಕೊಡು ಅಂತಾ ಹೇಳಿ ಅವನಿಗೆ ಕೊಡಿಸಿದ್ದು ಅವರ ನಿರಹಂಕಾರಿ ಹಾಗೂ ಬಡವರ ಬಗೆಗಿನ ನಿಜ ಕಳಕಳಿಗೆ ಸಾಕ್ಷಿಯಾದೆ.

ತಾವು ಹುಟ್ಟಿ ಬೆಳೆದ ಈ ಭಾಗದ ಬಗ್ಗೆ ಅವರಲ್ಲಿ ವಿಶೇಷ ಪ್ರೇಮ, ಆಗ ಹುಬ್ಬಳ್ಳಿಗೆ ನೈರುತ್ಯ ರೇಲ್ವೆ ಕೈ ತಪ್ಪಿದ ದಿನಗಳು ಹೋರಾಟದ ಕಾವು ಏರಿತ್ತು. ಹುಬ್ಬಳ್ಳಿಗೆ ನೈರುತ್ಯ ವಲಯ ಬೇಡವೆಂದು ಕೆಲವು ಹಿತಾಸಕ್ತಿಗಳು ಹೈಕೋರ್ಟ ತಡೆಯಾಜ್ಞೆ ತಂದ ಸಂದರ್ಭ. ಅದರ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‍ಎಲ್‍ಪಿ ಸಲ್ಲಿಸದೇ ರೈಲ್ವೆ ವಿಳಂಬ ಮಾಡಿ ಕಾಯಂ ಕೈ ತಪ್ಪುವ ಕಠಿಣ ಪರಿಸ್ಥಿತಿ. ಆಗ ನಾನು ಶ್ರೀ ಜಗದೀಶ ಶೆಟ್ಟರ ಹಾಗೂ ಆಗಿನ ಸಂಸದ ವಿಜಯ ಸಂಕೇಶ್ವರ, ಶ್ರೀ ಚಂದ್ರಕಾಂತ ಬೆಲ್ಲದ ಅವರೊಂದಿಗೆ ಪ್ರಧಾನಿ ಶ್ರೀ ವಾಜಪೇಯಿ ಅವರನ್ನು ಕಾಣಲು ದೆಹಲಿಗೆ ತೆರಳಿದ್ದೇವು, ಸ್ವಲ್ಪದರಲ್ಲಿಯೇ ಪ್ರಧಾನಿ ಭೇಟಿ ತಪ್ಪುವ ಸಾದ್ಯತೆ ಇತ್ತು, ಆಗ ಕೇಂದ್ರ ಸಚಿವ ಅನಂತ ಕುಮಾರ ತಮ್ಮ ವೈಯಕ್ತಿಕ ಪ್ರಭಾವದಿಂದ ಪಶ್ಚಿಮ ಬಂಗಾಲ ಪ್ರವಾಸಕ್ಕಾಗಿ ವಿಮಾನ ಏರಲಿದ್ದ ವಿಮಾನ ನಿಲ್ದಾಣದಲ್ಲಿಯೇ ಪ್ರಧಾನಿಯವನ್ನು ಭೇಟಿ ಮಾಡಿಸಿ ಕೇಂದ್ರ ರೈಲ್ವೆ ಸಚಿವ ಶ್ರೀ ನಿತೀಶ ಕುಮಾರ ಅವರಿಗೆ ನಿರ್ದೇಶನ ದೊರಕಿಸಿ ಎಸ್‍ಎಲ್‍ಪಿ ಸಲ್ಲಿಸಿ ಕೊನೆಗೂ ಹುಬ್ಬಳ್ಳಿಗೆ ನೈರುತ್ಯ ರೇಲ್ವೆ ಬರುವಂತೆ ಮಾಡಿದ್ದು ಇದಕ್ಕೆ ಸಾಕ್ಷಿಯಾಗಿದೆ. ಆಗ ಎಷ್ಟೋ ಜನರಿಂದ ಅನಂತಕುಮಾರ ಬೆಂಗಳೂರು ಸಂಸದರೋ ಅಥವಾ ಹುಬ್ಬಳ್ಳಿ ಭಾಗದ ಸಂಸದರೋ ಎಂಬ ಟೀಕೆಯನ್ನು ಎದುರಿಸಿದ್ದುಂಟು. ಇಂದಿಗೂ ಕೂಡಾ ಹುಬ್ಬಳ್ಳಿ ಧಾರವಾಡಕ್ಕೆ ಐಐಟಿ, ಹುಬ್ಬಳ್ಳಿ ವಿಮಾನ ನಿಲ್ದಾಣ, ಉಡಾನ್ ಯೋಜನೆಯಡಿ ಹುಬ್ಬಳ್ಳಿಗೆ ಅನೇಕ ವಿಮಾನಗಳ ಹಾರಾಟ ಮುಂತಾದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಅವರ ಪಾತ್ರವನ್ನು ನಾನೆಂದೂ ಮರೆಯಲಾರೆ.

ಹುಬ್ಬಳ್ಳಿಗೆ ಬಂದಾಗಲೆಲ್ಲಾ ಇಲ್ಲಿಯ ಗಿರ್ಮಿಟ್ ಹಾಗೂ ಮಿರ್ಚಿಭಜಿ ಸವಿಯದೇ ಹೋಗುತ್ತಿರಲಿಲ್ಲವೆಂಬುದು ಅವರ ಸಾಮಾನ್ಯ ನಡೆನುಡಿಗೆ ನಿದರ್ಶನ. 2004 ರಲ್ಲಿ ನಾನು ಸಂದನಾಗಿ ಆಯ್ಕೆಯಾಗಿ ದೇಹಲಿಗೆ ಹೊದ ನಂತರವಂತೂ ಅವರೊಂದಿಗೆ ನನ್ನ ಆತ್ಮೀಯತೆ ಇಮ್ಮಡಿಯಾಗಿತ್ತು. 2014 ರಲ್ಲಿ ಸಚಿವರಾದ ನಂತರ ಸಂಸತ್ ಭವನದಲ್ಲಿನ ಅವರ ಕಛೇರಿ ನಮ್ಮೆಲ್ಲರ ಚಟುವಟಿಕೆ ಕೇಂದ್ರವಾಗಿತ್ತು. ಅಧಿವೇಶನ ನಡೆದಾಗಲಂತೂ ನೀನು ಊಟಕ್ಕೆ ನನ್ನ ಕಛೇರಿ ಬಂದು ನಮ್ಮ ಮನೆಯ ಊಟವನ್ನೇ ಮಾಡು ಎಂದು ಅವರು ಅಕ್ಕರೆಯಿಂದ ಕರೆಯುತ್ತಿದ್ದ ಕ್ಷಣಗಳು ಇಂದು ನನ್ನ ಕಣ್ನೀರು ತಡೆಯಲಾಗದ ಕ್ಷಣಗಳು.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಸ್ಥಿತ್ವ ಬೇರೂರುವುದೇ ಎಂಬತ ಪ್ರಶ್ನೆ ಇದ್ದ ಸಂದರ್ಭದಲ್ಲಿ ಹೋರಾಟ ಹಾಗು ರಾಜಕೀಯ ಚಾಣಕ್ಷತೆ ಸಮ್ಮಿಳತವೇ ಆಗಿದ್ದ ಶ್ರೀ ಯಡಿಯೂರಪ್ಪ ಹಾಗು ಅನಂತಕುಮಾರ ಅವರ ಸಂಘಟಿತ ದುಡಿಮೆ ಇಲ್ಲದಿದ್ದರೆ ಇಂದು ಪಕ್ಷ ರಾಜ್ಯದಲ್ಲಿ ಉನ್ನತಸ್ಥಿತಿಯಲ್ಲಿ ಇರುತ್ತಿರಲಿಲ್ಲವೆಂಬುದು ಸರ್ವವಿದಿತ.

ಸಾರ್ವಜನಿಕ ಹಿತ ಸಾಧನೆಗೆ ತಮ್ಮ ಕಡು ವಿರೋಧಿಗಳ ಮನಸ್ಸನ್ನು ತಮ್ಮ ಸರಳ ಸೌಜನ್ಯತೆ ಹಾಗೂ ‘ಎಲ್ಲರೊಳಗೊಂದಾಗು ಮಂಕು ತಿಮ್ಮ’ ಎಂಬ ಅವರ ಸರಳ ನಡೆ ನುಡಿ ಎಲ್ಲರಿಗೂ ಮಾದರಿಯಾಗಿದೆ.

ಅವರ ತಂದೆ-ತಾಯಿ ಕ್ಯಾನ್ಸ್‍ರದಿಂದ ಬಳಲಿದ್ದ ಕಾರಣ ಕ್ಯಾನ್ಸರ್ ಸಂಬಂಧಿತ ಅನೇಕ ಔಷಧಿಗಳ ದರ ಇಳಿಸುವಲ್ಲಿನ ಅವರ ಕಾರ್ಯ ಸ್ಮರಣೀಯ. ಅಲ್ಲದೇ ರೈತರ ಮೇಲಿನ ಅವರ ವಿಶೇಷ ಕಾಳಜಿ ರಸಗೊಬ್ಬರ ಮಾಫಿಯಾಕ್ಕೆ ಜಗ್ಗದೇ ಬೇವು ಲೇಪಿತ ಯೂರಿಯಾ ತಂದದ್ದು ಅವರ ದಿಟ್ಟತನಕ್ಕೆ ಮತ್ತೊಂದು ನಿದರ್ಶನ. ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಅವರ ತಾತ್ವಿಕ ನಿಲುವು ಈ ಭಾಗದಲ್ಲೊಂದು ಸುಪರ್ ಸ್ಪೆಶಲ್ ಕ್ಯಾನ್ಸ್‍ರ ಆಸ್ಪತ್ರೆ ತರುವ ಅವರ ಸಂಕಲ್ಪ ಇತ್ತೆಂಬುದು ಹಾಗೂ ಕೊನೆಗೆ ಅವರೇ ಕ್ಯಾನ್ಸ್‍ರ್‍ಗೆ ತುತ್ತಾದದ್ದು ಒಂದು ದಃಖದಾಯಕವೇ ಸರಿ.

ನಿನ್ನೆ ಮೊನ್ನೆಯಷ್ಟೇ ಇದೇ ಉತ್ಸಾಹ, ಬದ್ದತೆ ಹಾಗು ಈ ಭಾಗದ ಒಟ್ಟಾರೆ ಕರ್ನಾಟಕ ರಾಜ್ಯದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಕಂಕಣಬದ್ಧರಾಗಿದ್ದ ನಮ್ಮ ನಿಮ್ಮೆಲ್ಲರ ಅನಂತ ಕುಮಾರ ಇನ್ನಿಲ್ಲವೆಂಬ ಸತ್ಯದಿಂದ ನನ್ನ ಎದೆ ಭಾರವಾಗಿದೆ. ದೇಶದ ರಾಜಕೀಯದಲ್ಲಿ ಇನ್ನೂ ಹಲವಾರು ದಶಕಗಳವರೆಗೂ ಹೊಳೆಯಬೇಕಾದ ನಾಯಕ ನಕ್ಷತ್ರ ಕಣ್ಮರೆಯಾಗಿರುವುದು ದೇಶದ ವಿಶೇಷವಾಗಿ ಕರ್ನಾಟಕ ರಾಜಕೀಯ ಕ್ಷೇತ್ರಕ್ಕೆ ಹಾಗೂ ಪಕ್ಷವನ್ನು ಹೊಸ ದಿಗಂತದತ್ತ ಮುನ್ನಡೆಸಬೇಕಾಗಿದ್ದ ಅಪರೂಪದ ರಾಜಕೀಯ ನಾಯಕ ಅಭಿವೃದ್ಧಿಯ ಹರಿಕಾರ ಹಾಗೂ ವೈಯಕ್ತಿಕವಾಗಿ ಒಬ್ಬ ನಮ್ಮ ಆತ್ಮೀ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ.

ಆವರ ಆತ್ಮಕ್ಕೆ ಶಾಂತಿ ದೊರಕಲಿ ಕುಟುಂಬ ವರ್ಗಕ್ಕೆ ನೊವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದೂ ದೇವರಲ್ಲಿ ಪ್ರಾರ್ಥಿಸುತ್ತೇನೆ.
– ಪ್ರಲ್ಹಾದ ಜೋಶಿ,
ಸಂಸದರು ಧಾರವಾಡ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ