ಬೆಂಗಳೂರು, ನ.12-ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರಾಜಕೀಯ ಚಟುವಟಿಕೆಗಳ ತಾಣವಾಗಿದ್ದ ಬಸವನಗುಡಿಯ ಕೇಂದ್ರ ಸಚಿವ ಅನಂತ್‍ಕುಮಾರ್ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು.
ಅನಾರೋಗ್ಯದಿಂದ ಅನಂತ್‍ಕುಮಾರ್ ಇಂದು ಮುಂಜಾನೆ ನಿಧನರಾದ ಸುದ್ದಿಯಿಂದ ಆಘಾತಕ್ಕೊಳಗಾದ ಅವರ ಬಂಧು-ಬಳಗ, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಗೆ ದಿಕ್ಕು ತೋಚದಂತಾಗಿತ್ತು.
ಶಂಕರ್ ಆಸ್ಪತ್ರೆಯಿಂದ ಮೃತ ದೇಹವನ್ನು ಅವರ ನಿವಾಸಕ್ಕೆ ತಂದಾಗ ಭಾರೀ ಸಂಖ್ಯೆಯಲ್ಲಿ ಜನ ಅವರ ಅಂತಿಮ ದರ್ಶನ ಪಡೆಯಲು ನೆರೆದಿದ್ದರು.
ಅವರ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಅವರ ಪತ್ನಿ ತೇಜಸ್ವಿನಿ ಅನಂತ್‍ಕುಮಾರ್, ಇಬ್ಬರು ಪುತ್ರಿಯರು, ಮತ್ತು ಸಂಬಂಧಿಕರಲ್ಲಿ ದುಃಖ ಉಮ್ಮಳಿಸಿ ಬರುತ್ತಿತ್ತು. ಇದಲ್ಲದೆ ಮೃತದೇಹದ ಅಂತಿಮ ದರ್ಶನ ಪಡೆಯಲು ಬಂದ ಬಹುತೇಕ ಜನ ತಮ್ಮ ಮನೆ ಮಗನನ್ನು ಕಳೆದುಕೊಂಡಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದರು. ಅನಂತ್‍ಕುಮಾರ್ ಅವರ ಅಪ್ತರ ಕಣ್ಣಂಚಿನಲ್ಲಿ ಅಶ್ರುಧಾರೆ ಸುರಿಯುತ್ತಿತ್ತು. ಸುರೇಶ್‍ಕುಮಾರ್, ಸೋಮಣ್ಣ, ಆರ್.ಅಶೋಕ್, ರವಿಸುಬ್ರಹ್ಮಣ್ಯ, ಸುಬ್ಬಣ್ಣ, ಪಿ.ಎನ್.ಸದಾಶಿವ, ಬಸವನಗುಡಿಯ ಅನೇಕರು ಮೃತ ದೇಹ ಕಂಡು ಭಾವೋದ್ವೇಗಕ್ಕೆ ಒಳಗಾದರು.
ಅದಮ್ಯ ಚೇತನದ ಸಿಬ್ಬಂದಿ ಕೂಡ ಅನಂತ್‍ಕುಮಾರ್ ನಿಧನಕ್ಕೆ ಕಂಬನಿ ಮಿಡಿದರು. ಮನೆಯ ಮುಂದೆ ಸೇರಿದ್ದ ಜನ ಕೈಯಲ್ಲಿ ಹೂವಿನ ಹಾರ ಹಿಡಿದು ಅನಂತ್‍ಕುಮಾರ್ ಅವರ ದರ್ಶನ ಪಡೆದು ಕೈ ಮುಗಿದು ಸಾಗಿದರು. ಅನಂತ್ ಕುಮಾರ್ ಅಮರ್ ರಹೇ ಎಂದು ಕೂಗುತ್ತಿದ್ದರು.
ಇಂತಹ ಮಹಾನುಭಾವನಿಗೆ ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ಸಾವು ಬರಬಾರದಿತ್ತು ಎಂದು ಹಲವು ಮಹಿಳೆಯರು, ಹಿರಿಯರು, ಪಕ್ಷದ ಮುಖಂಡರು ಮಾತನಾಡಿಕೊಳ್ಳುತ್ತಿದ್ದರು. ನಟ-ನಟಿಯರು, ಕಲಾವಿದರು, ಸಾಹಿತಿಗಳು, ಕನ್ನಡ ಪರ ಸಂಘಟನೆಗಳವರು, ಮಠಾಧೀಶರು ಪಕ್ಷಭೇದ ಮರೆತು ಆಗಮಿಸಿದ ರಾಜಕೀಯ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.
ರಾಜ್ಯಪಾಲ ವಿ.ಆರ್.ವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದರಾದ ಕೆ.ಎಚ್.ಮುನಿಯಪ್ಪ, ಬಿ.ವೈ.ರಾಘವೇಂದ್ರ, ಸಾಹಿತಿ ಪೆÇ್ರ.ದೊಡ್ಡರಂಗೇಗೌಡ, ನಟರಾದ ಭಾರತೀವಿಷ್ಣುವರ್ಧನ್, ಜಗ್ಗೇಶ್, ಪುನೀತ್‍ರಾಜ್‍ಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ್ ಕಂಬಾರ, ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‍ಭಾಸ್ಕರ್, ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು, ಮೇಯರ್, ಬಿಬಿಎಂಪಿ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಹಲವಾರು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.