ಅಜಾತಶತ್ರು ಅನಂತ್‍ಕುಮಾರ್ ನಿಧನ ಆಘಾತ ತರಿಸಿದೆ: ಸಚಿವ ಆರ್.ವಿ.ದೇಶಪಾಂಡೆ

Karnataka Medical Education Minister Sharan Prakash R Patil and Karnataka Higher Education Minister R V Deshpande declares CET results in Bangalore on May 27, 2014. (Photo: IANS)

ಬೆಂಗಳೂರು, ನ.12-ಅನಂತ್‍ಕುಮಾರ್ ಅಜಾತಶತ್ರುವಾಗಿದ್ದರು. ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರದ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಂತಹವರ ನಿಧನ ನಮ್ಮೆಲ್ಲರಿಗೂ ದುಃಖ ತರಿಸಿದೆ ಎಂದು ಹೇಳಿದ ಸಚಿವ ಆರ್.ವಿ.ದೇಶಪಾಂಡೆ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯುವಂತಾಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಅನಂತ್‍ಕುಮಾರ್ ನಿವಾಸದಲ್ಲಿ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿ ಹಲವು ಕೆಲಸಗಳನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಸುರೇಶ್‍ಕುಮಾರ್ ಮಾತನಾಡಿ, ಅನಂತ್‍ಕುಮಾರ್ ಇಲ್ಲದ ಬಿಜೆಪಿಯನ್ನು ಊಹೆ ಮಾಡಿಕೊಳ್ಳುವುದು ಕಷ್ಟ. 32 ವರ್ಷಗಳ ಅವರ ಒಡನಾಟವನ್ನು ಕಳೆದುಕೊಂಡಿದ್ದೇನೆ ಎಂದು ಶೋಕ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಮಾತನಾಡಿ, ಅನಂತ್‍ಕುಮಾರ್ ಅವರು ಅಪರೂಪದ ರಾಜಕಾರಣಿ. ಅವರಂಥವರು ತೀರಾ ವಿರಳ. ಎಲ್ಲ ವರ್ಗಗಳ ಪ್ರೀತಿ ವಿಶ್ವಾಸಕ್ಕೆ ಅವರು ಪಾತ್ರರಾಗಿದ್ದರು ಎಂದು ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೃತರ ಅಂತಿಮ ದರ್ಶನ ಪಡೆದು ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿ, ಅನಂತ್‍ಕುಮಾರ್ ಅವರು ಸ್ನೇಹಿಜೀವಿ. ನಮ್ಮೊಡನೆ ಇರಬೇಕಿತ್ತು. ಕರ್ನಾಟಕದ ಅಭಿವೃದ್ದಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಅನಂತ್‍ಕುಮಾರ್ ಅವರ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ದಕ್ಷ ಹಾಗೂ ಸಮರ್ಥ ಆಡಳಿತಗಾರನನ್ನು ನಮ್ಮ ಪಕ್ಷ ಕಳೆದುಕೊಂಡಿದೆ ಎಂದು ದುಃಖ ವ್ಯಕ್ತಪಡಿಸಿದರು.

ಅನಂತ್‍ಕುಮಾರ್ ಸರಳಜೀವಿ, ಅದ್ಭುತ ವ್ಯಕ್ತಿತ್ವ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಭಾಷಣ ತರ್ಜುಮೆ ಮಾಡುತ್ತಿದ್ದುದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.ಅವರ ಅಗಲಿಕೆ ನೋವು ತಡೆಯಲು ಸಾಧ್ಯವಿಲ್ಲ ಎಂದು ಚಿತ್ರ ನಟ ಜಗ್ಗೇಶ್ ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಮಾತನಾಡಿ, ಕೆಲವೇ ದಿನಗಳ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿ ವಿಸರ್ಜನೆ ಮಾಡಿದ್ದರು. ಇಂದು ಅವರ ಅಸ್ಥಿಯನ್ನು ವಿಸರ್ಜನೆ ಮಾಡುವಂತಹ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ ಎಂದು ಹೇಳಿದರು.
ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮಾತನಾಡಿ, 1987ರಿಂದಲೂ ಅನಂತ್‍ಕುಮಾರ್ ನನಗೆ ಚಿರಪರಿಚಿತರು. ಅವರ ಸಾವು ರಾಜ್ಯಕ್ಕೇ ಅಲ್ಲದೆ, ಇಡೀ ದೇಶಕ್ಕೆ ನಷ್ಟ ಉಂಟು ಮಾಡಿದೆ ಎಂದರು.

ಸ್ಪೀಕರ್ ರಮೇಶ್‍ಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವರಾದ ಎನ್.ಮಹೇಶ್, ಎಂ.ಬಿ.ಪಾಟೀಲ್, ವೈ.ಎಸ್.ವಿ.ದತ್ತ, ಪದ್ಮನಾಭರೆಡ್ಡಿ, ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ನಗರ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್, ಟಿ.ಎನ್.ಸೀತಾರಾಮ್, ಎಸ್.ರಘು, ಬಿ.ಎನ್.ಬಚ್ಚೇಗೌಡ, ಇನ್ಫೋಸಿಸ್ ಮುಖ್ಯಸ್ಥರಾದ ಸುಧಾನಾರಾಯಣಮೂರ್ತಿ ಸೇರಿದಂತೆ ಹಲವು ಗಣ್ಯರು ಅನಂತ್‍ಕುಮಾರ್ ನಿಧನಕ್ಕೆ ಕಂಬನಿ ಮಿಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ