
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಆನಂದ್ ಪಿರಮಲ್ ವಿವಾಹಕ್ಕೆ ಸಿದ್ಧತೆಗಳು ನಡೆದಿವೆ. ಈ ವೈಭೋಗದ ಮದುವೆಗೆ ಅದ್ಧೂರಿಯ ಕರೆಯೋಲೆಯೂ ರೂಪುಗೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಮದುವೆ ಆಹ್ವಾನ ಪತ್ರಿಕೆಯ ಒಂದರ ದರ ಕೇವಲ 3 ಲಕ್ಷ ರೂ. ಮಾತ್ರ!
ಇಶಾ ಮತ್ತು ಆನಂದ್ ಅವರ ಮೊದಲ ಅಕ್ಷರಗಳನ್ನು ಸೇರಿಸಿ ‘ಐಎ’ ಎಂಬುದಾಗಿ ಆಹ್ವಾನ ಪತ್ರಿಕೆಯ ಮೇಲೆ ಮುದ್ರಿಸಲಾಗಿದೆ. ಒಂದು ಚೆಂದದ ಚಿತ್ತಾರದ ಪೆಟ್ಟಿಗೆಯಲ್ಲಿ ಆಹ್ವಾನಪತ್ರಿಕೆಯನ್ನು ಇಡಲಾಗಿದ್ದು, ಪೆಟ್ಟಿಗೆ ತೆರೆದರೆ ಡೈರಿಯೊಂದು ಕಾಣುತ್ತದೆ. ಮದುವೆಗೆ ಅದರಲ್ಲಿ ಆಹ್ವಾನ ಮಾಡಲಾಗಿದೆ. ಈ ಡೈರಿಯ ನಾಲ್ಕನೇ ಪುಟದಲ್ಲಿ ಇಶಾ ಮತ್ತು ಆನಂದ್ ಬರೆದ ಪತ್ರವೊಂದಿದೆ. ಇತರೆ ಪುಟಗಳಲ್ಲಿ ನಾನಾ ಸಂಗತಿಗಳಿದ್ದು, ‘ಶುಭ್ ಅಭಿನಂದನ್’ ಎಂದು ಬರೆಯಲಾಗಿದೆ. ಚಿನ್ನದ ಬಣ್ಣದ ದ್ವಾರಗಳನ್ನು ಹೊಂದಿದ ಹಾಳೆಗಳು ಅದರಲ್ಲಿವೆ.
ಆಹ್ವಾನದ ಪೆಟ್ಟಿಗೆಯಲ್ಲಿ ಇನ್ನೊಂದು ಪೆಟ್ಟಿಗೆಯೂ ಇದೆ. ಅದು ಗುಲಾಬಿ ಬಣ್ಣದಲ್ಲಿದ್ದು ಅದರ ಮೇಲೆ ಚಿನ್ನದ ಕಸೂತಿ ಹೊಂದಿದೆ. ಆ ಪೆಟ್ಟಿಗೆಯ ಬಾಗಿಲು ತೆರೆದರೆ ಗಾಯತ್ರಿ ಮಂತ್ರದ ಟ್ಯೂನ್ ಕೇಳಿಸುತ್ತದೆ. ಆ ಪೆಟ್ಟಿಗೆಯಲ್ಲಿ ಆಭರಣಗಳನ್ನು ಇಡುವಂಥ ನಾಲ್ಕು ಸಣ್ಣ ಪೆಟ್ಟಿಗೆಗಳಿವೆ. ಆ ಪೆಟ್ಟಿಗೆಗಳಲ್ಲಿರುವ ಪುಟಾಣಿ ಚೀಲಗಳಲ್ಲಿ ಬೆಲೆಬಾಳುವ ಕಲ್ಲು, ಹರಳುಗಳನ್ನು ಹೊಂದಿದ ನೆಕ್ಲೇಸ್ ಮತ್ತು ಸರಗಳಿವೆ. ಚಿನ್ನದ ಚೌಕಟ್ಟಿನ ದೇವರ ಪಟಗಳನ್ನೂ ಆ ಪೆಟ್ಟಿಗೆಯಲ್ಲಿ ಇಡಲಾಗಿದೆ.
ಮುಕೇಶ್ ಮತ್ತು ನಿತಾ ಅಂಬಾನಿಯು ತಮ್ಮ ಪುತ್ರಿ ವಿವಾಹವನ್ನು ಡಿ.12ಕ್ಕೆ ನಿಗದಿ ಮಾಡಿರುವುದಾಗಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಈ ಆಹ್ವಾನ ಪತ್ರಿಕೆ ಹೊರಬಿದ್ದಿದೆ. ಕಳೆದ ಮೇ ತಿಂಗಳಲ್ಲಿ ಇಶಾ ಮತ್ತು ಆನಂದ್‌ರ ನಿಶ್ಚಿತಾರ್ಥವಾಗಿತ್ತು. ಕಳೆದ ತಿಂಗಳ ಇಟಲಿಯಲ್ಲಿ ಮೂರು ದಿನಗಳ ಕಾಲ ಅಂಬಾನಿ ಕುಟುಂಬ ಅದ್ಧೂರಿ ಕಾರ್ಯಕ್ರಮ ನಡೆಸಿದ್ದು, ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು. ಪಿರಮಲ್ ರಿಯಾಲ್ಟಿಯ ಸಂಸ್ಥಾಪಕ ಅಜಯ್ ಪಿರಮಲ್‌ರ ಪುತ್ರನಾದ ಆನಂದ್ ಮತ್ತು ಇಶಾ ವಿವಾಹ ಎಲ್ಲರ ಗಮನ ಸೆಳೆದಿದೆ.